Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಲಿಂಗಾಯತರಿಗೆ ಕಾಂಗ್ರೆಸ್ ನಿಂದ ಮೋಸ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬಾಗಲಕೋಟೆ : ಕರ್ನಾಟಕದಲ್ಲಿ ಲಿಂಗಾಯತ ಜಾಗೃತ ಮತದಾರರಿದ್ದಾರೆ. ಯಾವಾಗೆಲ್ಲ ಅವರು ನಿರ್ಣಯ ತೆಗೆದುಕೊಂಡಿದ್ದಾರೆ, ಆಗ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಚುನಾವಣೆ ಬಂದ ಮೇಲೆ ಕಾಂಗ್ರೆಸ್ ಲಿಂಗಾತಯರ ಮೇಲೆ ಪ್ರೀತಿ ತೋರಿಸುತ್ತಿದೆ. ಕಾಂಗ್ರೆಸ್ ಲಿಂಗಾಯತರನ್ನೇ ಒಡೆದು ಛಿದ್ರ ಮಾಡಲು ಹೊರಟಿತ್ತು. ಕಾಂಗ್ರೆಸ್ ನ ಒಡೆದು ಆಳುವ ನೀತಿ ಯಾರೂ ಎಂದಿಗೂ ಮರೆಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಮುಧೋಳದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಹೆಲಿಪ್ಯಾಡ್ ಬಳಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.ಲಿಂಗಾಯತರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ವಿರೋಧ ಮಾಡಿತ್ತು. 2009 ರಲ್ಲಿ 2ಎ ಸೇರಿಸಲು ವಿರೋಧಿಸಿ, 2016ರಲ್ಲಿ ಅದನ್ನು ತಿರಸ್ಕಾರ ಮಾಡಿದ್ದರು. ನಾವು 2ಡಿ ವರ್ಗ ರಚನೆ ಮಾಡಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ಧೇವೆ. ಈಗ ಪರೋಕ್ಷವಾಗಿ ಕುಮ್ಮಕ್ಕು ನೀಡಿ ಸುಪ್ರಿಂ ಕೋರ್ಟ್ ನಲ್ಲಿ ಪ್ರಶ್ನಿಸಿ ಕೇಸ್ ಹಾಕಿದ್ದಾರೆ. ಲಿಂಗಾಯತರ ಪ್ರತಿಯೊಂದು ಅಭಿವೃದ್ಧಿಯಲ್ಲೂ ಕಾಂಗ್ರೆಸ್ ವಿರೋಧ ಮಾಡಿದೆ. ಸಿದ್ದರಾಮಯ್ಯ ಕಾಲದಲ್ಲಿ ಇದ್ದ ಜಿಲೇಬಿ ಫೈಲ್ ಯಾರೂ ಮರೆಯಲ್ಲ ಎಂದರು.

ಕೃಷ್ಣ ವಿಚಾರದಲ್ಲಿ ಏನು ಮಾಡಿದ್ದೀರಿ. ಒಂದು ಎಕರೆ ಭೂಮಿಗೆ ನೀರು ಕೊಡುವುದಕ್ಕೆ ಆಗಲಿಲ್ಲ. ಇಲ್ಲಿ ಯಾವ ರೀತಿಯ ರೈತರಿದ್ದಾರೆ. ಹೀಗಾಗಿ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಆಡಳಿತಾತ್ಮಕವಾಗಿ ಯಾರು ಇದ್ದಾರೆ ಅನ್ನುವುದನ್ನು ಹಾಗೂ ಮಂತ್ರಿಮಂಡಲದಲ್ಲಿ ಎಷ್ಟು ಜನರು ಇದ್ದಾರೆ ಎನ್ನುವುದನ್ನು ಜನರು ಗಮಿನಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ 1967ರ ನಂತರ ವೀರೇಂದ್ರ ಪಾಟೀಲರನ್ನು ಬಿಟ್ಟರೆ, ಬೇರೆ ಯಾರು ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಾಗಿಲ್ಲ. ಅವರನ್ನು ಕೂಡು ಅತ್ಯಂತ ಹೀನಾಯವಾಗಿ ನಡೆಸಿಕೊಂಡರು. ರಾಜಶೇಖರಮೂರ್ತಿ, ವಿರೂಪಾಕ್ಷಪ್ಪನವರ ಕಥೆ ಏನಾಯಿತು. ಈಗ ಎಸ್. ಆರ್ ಪಾಟೀಲರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸ್ಥಾನ, ಸಭಾಪತಿ ಸ್ಥಾನವನ್ನು ತಪ್ಪಿಸಿದರು ಎಂದರು.

ಈ ಭಾಗದ ಅಭಿವೃದ್ಧಿಯಾಗಿದ್ದು ಬಿಜೆಪಿಯಿಂದ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಅಭಿವೃದ್ಧಿ ಮಾಡಿ ಸಾಮಾಜಿಕ ನ್ಯಾಯವನ್ನು ಬಿಜೆಪಿ ಪಕ್ಷ ಕೊಟ್ಟಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಯಾರೇ ಹೋದರು ಯಾವುದೇ ಪರಿಣಾಮ ಆಗುವುದಿಲ್ಲ. ಕರ್ನಾಟಕದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನದಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.

ಪಕ್ಷ ಯಾರ ಕಪಿಮುಷ್ಠಿಯಲ್ಲಿಲ್ಲ : ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಒಬ್ಬರ ಹಿಡಿತದಲ್ಲಿ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ನಮ್ಮ ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಬಿಜೆಪಿ ಸರ್ವೊಚ್ಚ ನಾಯಕ ಮೋದಿ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಮೇಲಿದೆ. ಆರೋಪ ಮಾಡುತ್ತಿರುವವರು ಈ ಹಿಂದೆ ಒಂದು ಕೇಂದ್ರ ಆಗಿದ್ದರಲ್ಲವೇ ಎಂದರು. ಇನ್ನು ಇದೇ ವೇಳೆ ಬಿಜೆಪಿ ಅಭ್ಯರ್ಥಿಗಳ ಪರ ನಟ ಸುದೀಪ್ ಪ್ರಚಾರದ ಬಗ್ಗೆ ರೂಪುರೇಷೆ ಪೂರ್ಣ ಆಗಿಲ್ಲ. ನಾಳೆ ಸುದೀಪ್ ಪ್ರಚಾರದ ಬಗ್ಗೆ ರೂಪುರೇಷೆ ಮಾಡುತ್ತೇವೆ. ಬಳಿಕ ಸುದೀಪ್ ಎಲ್ಲ ಕಡೆಯೂ ಪ್ರಚಾರಕ್ಕೆ ಬರುತ್ತಾರೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ