ಮಂಡ್ಯ : ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರ ಮಧ್ಯಪ್ರವೇಶದ ಬಳಿಕ ತೆರೆಮರೆಗೆ ಸರಿದಿದ್ದ ಉರಿಗೌಡ ಮತ್ತು ನಂಜೇಗೌಡ ವಿವಾದವನ್ನು ಬಿಜೆಪಿ ಮತ್ತೆ ಮುನ್ನಲೆಗೆ ತಂದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದ ಬಿಜೆಪಿ ರೈತ ಮೋರ್ಚಾದ ರೈತ ಸಮಾವೇಶದ ಪ್ರವೇಶ ದ್ವಾರದಲ್ಲೇ ಅವರ ಹೆಸರು ಮತ್ತು ಚಿತ್ರಗಳನ್ನು ಹಾಕಲಾಗಿತ್ತು. ಇಡೀ ಕಾರ್ಯಕ್ರಮದ ಪ್ರವೇಶ ದ್ವಾರಕ್ಕೆ ಉರಿಗೌಡ ದೊಡ್ಡ ನಂಜೇಗೌಡ ದ್ವಾರ ಎಂದೇ ಹೆಸರಿಡಲಾಗಿತ್ತು. ಪಟ್ಟಣದ ಟಿಎಪಿಸಿಎಂಎಸ್ ಪ್ರವೇಶ ದ್ವಾರಕ್ಕೆ ಉರಿಗೌಡ ನಂಜೇಗೌಡ ಹೆಸರಿನಲ್ಲಿ ಫ್ಲೆಕ್ಸ್ ಹಾಕಲಾಗಿತ್ತು.
ಉರಿಗೌಡ ನಂಜೇಗೌಡ ವಿಚಾರ ವಿವಾದಕ್ಕೆ ತಿರುಗಿದ ಬಳಿಕ ಜಿಲ್ಲಾಡಳಿತ ಕಾರ್ಯಕ್ರಮಕ್ಕೆಂದು ಹಾಕಲಾಗಿದ್ದ ಫ್ಲೆಕ್ಸ್ ಗಳನ್ನು ತೆರವುಗೊಳಿಸಿತ್ತು. ಸಚಿವ ಮುನಿರತ್ನ ಇದೇ ಹೆಸರಿನಲ್ಲಿ ಸಿನಿಮಾ ಮಾಡುವುದಾಗಿ ಘೋಷಿಸಿದಾಗ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರು ಮುನಿರತ್ನ ಅವರನ್ನು ಕರೆಸಿ ಸಾಕ್ಷ್ಯಾಧಾರ ಲಭ್ಯವಾಗುವ ತನಕ ಯಾರೂ ಕೂಡ ಈ ಕುರಿತ ಚರ್ಚೆ ಮುಂದುವರಿಸಬಾರದು ಎಂದ ತಿಳಿಸಿದ್ಮೇದರು. ಬಳಿಕ ಈ ಚರ್ಚೆ ತಣ್ಣಗಾಗಿತ್ತು. ಈ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಇದರ ಬಹಿರಂಗ ಚರ್ಚೆ ಅಗತ್ಯ ಎಂದು ಪ್ರತಿಪಾದಿಸಿದ್ದರು . ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಚರ್ಚೆ ತಡೆದ ಶ್ರೀಗಳ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಉರಿಗೌಡ ನಂಜೇಗೌಡ ಹೆಸರಿನ ದ್ವಾರದ ವಿವಾದ ಪಾಂಡವಪುರಕ್ಕೂ ಕಾಲಿಟ್ಟಿದೆ. ಪ್ರಕರಣಕ್ಕೆ ಮತ್ತೆ ಜೀವ ನೀಡುವ ಪ್ರಯತ್ನ ನಡೆದಿದೆ. ಕಾರ್ಯಕ್ರಮದ ಸ್ವಾಗತ ಫ್ಲೆಕ್ಸ್ ನಲ್ಲಿ ಶೋಭಾ ಕರಂದ್ಲಾಜೆ ಅವರ ಪೋಟೋ ಕೂಡಾ ಹಾಕಲಾಗಿತ್ತು.