Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸ್ಯಾಂಟ್ರೋ ಬಂಧನ: ನಿಮಿಷಾಂಬಾ ದೇವಿಗೆ ಪೂಜೆ ಸಲ್ಲಿಸಿದ ಅಲೋಕ್‌ ಕುಮಾರ್‌

ಮಂಡ್ಯ: ಸ್ಯಾಂಟ್ರೋ ರವಿ ಬಂಧನದೊಂದಿಗೆ ರಾಜ್ಯ ಪೊಲೀಸರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸ್ಯಾಂಟ್ರೋ ರವಿಯನ್ನು ಕೋರ್ಟಿಗೆ ಹಾಜರುಪಡಿಸಿರುವ ಪೊಲೀಸರು ಈಗ ಆತನ ಪಾತಕ ಕೃತ್ಯಗಳನ್ನು ಬಾಯಿ ಬಿಡಿಸಲು ಸಿದ್ಧತೆ ನಡೆಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾದ ಈ ಆರೋಪಿಯನ್ನು ಹಿಡಿಯಲು ಎಡಿಜಿಪಿ ಅಲೋಕ್ ಕುಮಾರ್ ದೇವರಿಗೆ ಹರಕೆ ಹೊತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಸ್ಯಾಂಟ್ರೋ ಬಂಧನಕ್ಕೆ ಪೊಲೀಸ್ ಇಲಾಖೆ ಮೇಲೆ ಒತ್ತಡ ಹೆಚ್ಚಾಗಿತ್ತು. ಇದರಿಂದ ಪೊಲೀಸರು ಹಲವು ತಂಡಗಳನ್ನು ಮಾಡಿಕೊಂಡು ಬೇರೆ-ಬೇರೆ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರು. ಇತ್ತ ಅಲೋಕ್ ಕುಮಾರ್ ಸ್ಯಾಂಟ್ರೋ ರವಿ ಬಂಧನವಾಗಲಿ ಎಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನ ನಿಮಿಷಾಂಭ ದೇವಿಗೆ ಹರಕೆ ಹೊತ್ತಿದ್ದರು. ಇದೀಗ ಸ್ಯಾಂಟ್ರೋ ರವಿ ಪೊಲೀಸ್ ಬಲೆಗೆ ಬಿದ್ದ ಹಿನ್ನೆಲೆಯಲ್ಲಿ ಶನಿವಾರ ಅಲೋಕ್ ಕುಮಾರ್ ನಿಮಿಷಾಂಬ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಹರಕೆ ತೀರಿಸಿದರು.

ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್, “” ದೇವಿ ಮೇಲೆ ಹನ್ನೆರಡು ವರ್ಷಗಳಿಂದ ನನಗೆ ನಂಬಿಕೆ ಇದೆ. 2011 ರಲ್ಲಿ ಮೈಸೂರಿನಲ್ಲಿ ಡಬಲ್ ಮರ್ಡರ್ ಕೇಸ್ ಆಗಿತ್ತು. ಆಗಲೂ ಬಂದು ನಾನು ದೇವಿಗೆ ಹರಕೆ ಹೊತ್ತಿದ್ದೆ. ಹಾಗೇ ಹರಕೆ ಹೊತ್ತು ಪೂಜೆ ಸಲ್ಲಿಸಿ ನಾವು ಮೈಸೂರಿಗೆ ಹೋಗುವುದರೊಳಗಾಗಿ ಐದೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈಗಲೂ ಹತ್ತನೇ ತಾರೀಕಿಗೆ ಬಂದು ನಾನು ಪೂಜೆ ಸಲ್ಲಿಸಿ ಸ್ಯಾಂಟ್ರೋ ರವಿ ಬಂಧನವಾಗಲಿ ಎಂದು ಹರಕೆ ಹೊತ್ತಿದ್ದೆ. ಈಗಲೂ ಹರಕೆ ಹೊತ್ತ 22 ಗಂಟೆಗಳಲ್ಲೇ ಆರೋಪಿ ಸಿಕ್ಕಿದ್ದಾನೆ. ಹಾಗಾಗಿ ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದೇನೆ ಎಂದರು.

ಆತನಿಂದಾಗಿ (ಸ್ಯಾಂಟ್ರೋ ರವಿ) ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿತ್ತು. ಹಾಗಾಗಿ ಆತ ನಮಗೆ ಬೇಗ ಸಿಗಲಿ ಎಂದು ಹರಕೆ ಹೊತ್ತಿದ್ದೆ. ಈಗ ಸ್ಯಾಂಟ್ರೋ ರವಿ ನಮ್ಮ‌ ಕಸ್ಟಡಿಯಲ್ಲಿದ್ದಾನೆ. ಆತನ ಹೇಳಿಕೆ ದಾಖಲಿಸಲಾಗುತ್ತಿದೆ. ಮೊದಲು ಆತನ ವಿರುದ್ದ ದಾಖಲಾಗಿರುವ ಕೇಸ್ ಬಗ್ಗೆ ವಿಚಾರಣೆ ನಡೆಯಲಿದೆ. ಬಳಿಕ ತಲೆ ಮರೆಸಿಕೊಂಡು ಎಲ್ಲೆಲ್ಲಿ ಇದ್ದ, ಆತನಿಗೆ ಯಾರೆಲ್ಲಾ ಸಹಾಯ ಮಾಡಿದ್ದರು ಎನ್ನುವ ಬಗ್ಗೆ ವಿಚಾರಣೆ ಮಾಡುತ್ತೇವೆ. ಹಾಗೊಂದು ವೇಳೆ ಯಾರಾದ್ರು ಸಹಾಯ ಮಾಡಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ