ಚಾಮರಾಜನಗರ: ಬಹುಜನ ವಾಲೆಂಟಿಯರ್ ಫೋರ್ಸ್ (ಬಿವಿಎಫ್) ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಅವರ 66 ನೇ ಪರಿನಿಬ್ಬಾಣ ದಿನಾಚರಣೆಯ ಅಂಗವಾಗಿ ‘ಮೀಸಲಾತಿ ಪ್ರಾತಿನಿಧ್ಯವೋ-ಆರ್ಥಿಕ ಸಬಲೀಕರಣವೋ’ ಎಂಬ ವಿಷಯ ಕುರಿತು ವಿಚಾರ ಸಂಕಿರಣವನ್ನು ಡಿ.೪ ರಂದು ಆಯೋಜಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರಕಾಂತ್ ತಿಳಿಸಿದರು.
ಅಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ ಉಪಸ್ಥಿತರಿದ್ದು, ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಚಿತ್ರನಟ ಚೇತನ್ ಅಹಿಂಸಾ ಪುಷ್ಪಾರ್ಚನೆ ಮಾಡಲಿದ್ದು, ವಿಚಾರವಾದಿ ಹ.ರಾ.ಮಹೇಶ್ ಮೀಸಲಾತಿ ಕುರಿತು ವಿಚಾರ ಮಂಡಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅತಿಥಿಗಳಾಗಿ ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಬಿಎಸ್ಪಿ ಜಿಲ್ಲಾಧ್ಯಕ್ಷ ನಾಗಯ್ಯ, ಆರ್.ಉಮೇಶ್, ಮಹೇಶ್‌ಕುದರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿರುವುದು ಖಂಡನೀಯ. ಈ ಮೂಲಕ ಕೇಂದ್ರ ಸರ್ಕಾರ ಬಡ ಮಕ್ಕಳು ಶಾಲೆಯಿಂದ ದೂರ ಉಳಿಯುವಂತೆ ಮಾಡಿದೆ ಎಂದು ದೂರಿದರು.
ಬಿವಿಎಫ್‌ನ ಜಿಲ್ಲಾ ಸಂಯೋಜಕರಾದ ಎಂ.ರವಿಮೌರ್ಯ, ಆಶ್ರಿತ್, ತಾಲ್ಲೂಕು ಸಂಯೋಜಕ ಮಹೇಶ್, ರಾಜು ಹಾಜರಿದ್ದರು.