Mysore
21
overcast clouds

Social Media

ಬುಧವಾರ, 15 ಜನವರಿ 2025
Light
Dark

ಸಚಿವ ಎಸ್‌ಟಿಎಸ್‌ಗೆ ಘೇರಾವ್ ಹಾಕಿದ ಕಬ್ಬು ಬೆಳೆಗಾರರು

ಮೈಸೂರು: ಮೈಸೂರು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಕಬ್ಬು ಬೆಳೆಗಾರರು ಘೇರಾವ್ ಹಾಕಿದರು.

ಮುಕ್ತಗಂಗೋತ್ರಿಯಲ್ಲಿ ಧಿಕ್ಕಾರ ಕೂಗುತ್ತಾ ಸಚಿವರನ್ನು ಅಡ್ಡಗಟ್ಟಿದ್ದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು ರೈತರನ್ನು ಬಂಧಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಘೋಷಣೆ ಕೂಗಿದರು.

ಸುಮಾರು ೧೦ ದಿನಗಳ ಕಾಲ ಜಿಲ್ಲಾಧಿಕಾರಿ ಕಚೇರಿ ಬಳಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕಬ್ಬು ಬೆಳೆಗಾರರು, ಬಗರ್ ಹುಕುಂ ಸಾಗುವಳಿದಾರರು ವಿವಿಧ ಬೇಡಿಕೆ ಈಡೇರಿಕೆಗಾಗಿ ಅಹೋರಾತ್ರಿ ಧರಣಿ ನಡೆಸಿದ್ದು, ಸಚಿವರು ಸೌಜನ್ಯಕ್ಕಾದರೂ ರೈತರನ್ನು ಭೇಟಿ ಮಾಡಲಿಲ್ಲ. ಅದಕ್ಕೆ ಅವರಿಗೆ ಮುತ್ತಿಗೆ ಹಾಕುವ ಮೂಲಕ ಎಚ್ಚರಿಸಿದ್ದೇವೆ. ಕೂಡಲೇ ಎಚ್ಚೆತ್ತುಕೊಂಡು ಕಬ್ಬು ಬೆಳೆಗಾರ ರೈತರ ಕುಂದುಕೊರತೆಗಳ ಪರಿಹರಿಸಲು ಸಭೆ ಕರೆಯಬೇಕು. ಇಲ್ಲವಾದರೆ, ಜಿಲ್ಲೆಗೆ ಯಾವುದೇ ಕಾರ್ಯಕ್ರಮಕ್ಕೆ ಬಂದರೂ ಸಹ ಇನ್ನೂ ವಿಭಿನ್ನ ರೀತಿಯಲ್ಲಿ ಸಚಿವರಿಗೆ ಪ್ರತಿಭಟನೆಯ ಬಿಸಿಯನ್ನು ಮುಟ್ಟಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಬಿ. ಪಿ. ಪರಶಿವಮೂರ್ತಿ, ಅಂಬಳೆ ಮಂಜುನಾಥ್, ಡಿ. ಕಾಟೂರು ಮಾದೇವಸ್ವಾಮಿ, ಕಿರಗಸೂರು ಪ್ರಸಾದ್ ನಾಯಕ, ವರಕೋಡು ನಾಗೇಶ್, ಚುಂಚುರಾಯನ ಹುಂಡಿ ಸತೀಶ್, ಹಿರಿಯೂರು ರಾಜೇಶ್ ಮುಂತಾದವರು ಪಾಲ್ಗೊಂಡಿದ್ದರು.

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ