Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಗರಳಪುರಿಯ ಗರಿಮೆ

 ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ನಂಜನಗೂಡು ಒಂದೆನಿಸಿದೆ. ಕಪಿಲಾ ನದಿಯ ಬಲದಂಡೆಯ ಮೇಲಿರುವ ಇದರ ಮತ್ತೊಂದು ಹೆಸರು ಗರಳಪುರಿ. ನಮ್ಮ ರಾಜ್ಯದ ಕೈಗಾರಿಕಾ ಭೂಪಟದಲ್ಲಿಯೂ ಮಹತ್ತರ ಸ್ಥಾನ ಪಡೆದಿರುವ ನಂಜನಗೂಡು ವಾಣಿಜ್ಯ ತೆರಿಗೆಯ ಆದಾಯದಲ್ಲಿಯೂ ಕರ್ನಾಟಕದ ಪಟ್ಟಣಗಳಲ್ಲಿಯೇ ಮೊದಲ ಸಾಲಿನಲ್ಲಿದೆ. ಹಾಗೆಯೇ ಸಾಹಿತ್ಯ, ಕಲೆ, ಸಂಸ್ಕೃತಿಗಳ ಬೀಡು ನಂಜನಗೂಡು. ಇದಕ್ಕೆ ಕೈಗನ್ನಡಿಯಂತೆ ೨೦ನೇ ಶತಮಾನದ ಆಧುನಿಕ ಕನ್ನಡ ಸಾಹಿತ್ಯದ ಮೊಟ್ಟ ಮೊದಲ ಲೇಖಕಿ ಪತ್ರಕರ್ತೆ ನಂಜನಗೂಡು ತಿರುಮಲಾಂಬಾ, ನಾಟ್ಯ ಸಂಗೀತದ ಮೇರು ನಾಗರತ್ನಮ್ಮ, ಸಾಹಿತಿ-ಸಮಾಜ ಚಿಂತಕ ನಂಜನಗೂಡು ಶ್ರೀಕಂಠಶಾಸ್ತ್ರೀ, ಇತಿಹಾಸತಜ್ಞ ಡಾ. ಶ್ರೀಕಂಠಶಾಸ್ತ್ರೀ  ಆಯುರ್ವೇದದ ಬಿ.ವಿ. ಪಂಡಿತರು, ಸಂಘಟಕ-ಸಾಹಿತಿ ಮುಳ್ಳೂರು ನಾಗರಾಜ್, ಚಿತ್ರರಂಗದ ಹೆಚ್. ಎಲ್ ಎನ್ ಸಿಂಹ ಮೊದಲಾದವರು ಇದ್ದಾರೆ. ಅಂತೆಯೇ ಸಾಹಿತ್ಯ, ವಿಜ್ಞಾನ, ಕ್ರೀಡೆ, ಚಲನಚಿತ್ರ, ಸಂಸ್ಕೃತ ವೇದ ಪತ್ರಿಕಾರಂಗಗಳಲ್ಲಿನ ತಮ್ಮ ಸಾಧನೆಗಾಗಿ ರಾಷ್ಟ್ರ ಪುರಸ್ಕಾರವನ್ನು ಪಡೆದ ಹಲವು ಮಹನೀಯರು ಇದ್ದಾರೆ.

ನಂಜನಗೂಡು ಸತ್ಯನಾರಾಯಣ
ಮಹಾತ್ಮಾಗಾಂಧೀಜಿಯವರ ಅನುಯಾಯಿಯಾಗಿ ಸ್ವತಂತ್ರ ಪೂರ್ವದಲ್ಲಿಯೇ ನಂಜನಗೂಡು ತಾಲ್ಲೂಕಿನ ತಗಡೂರು ಹಾಗೂ ಬದನವಾಳು ಗ್ರಾಮಗಳಲ್ಲಿ ಖದ್ದರ್ ಸಹಕಾರ ಸಂಘವನ್ನು ಸ್ಥಾಪಿಸಿದವರು ಸ್ವಾತಂತ್ರತ್ಯೃ ಹೋರಾಟಗಾರ ಹಾಗೂ ಸಾವಾಜಿಕ ಕಾರ್ಯಕರ್ತರಾದ ತಗಡೂರು ರಾಮಚಂದ್ರರಾವ್. ೧೯೨೧ ರಲ್ಲಿ ಸ್ವರಾಜ್ಯ ಮಂದಿರ ಹಾಗೂ ಸತ್ಯಾಗ್ರಹ ಆಶ್ರಮಗಳನ್ನು ಸ್ಥಾಪಿಸಿದ ಇವರು ಅಸ್ಪೃಶ್ಯತೆಯ ನಿವಾರಣೆಗಾಗಿನ ಚಳುವಳಿ ಮತ್ತು ಗೋ ಸಂರಕ್ಷಣಾ ಚಳವಳಿಗಳಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು. ೧೯೩೨ರಲ್ಲಿ ಗಾಂಧೀಜಿಯವರು ಬದನವಾಳಿಗೆ ಭೇಟಿ ನೀಡಿದಾಗ ಇವರ ಕಾರ್ಯವನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಇವರ ಸಮಾಜ ಮುಖಿ ಕಾರ್ಯಗಳಿಗಾಗಿ ೧೯೮೩ರಲ್ಲಿ ಜಮುನಾಲಾಲ್ ಬಜಾಜ್ ರಾಷ್ಟ್ರೀಯ ಪ್ರಶಸ್ತಿ ಇವರಿಗೆ ಸಂದಿತು. ಇವರು ತಮ್ಮ ೯೨ ರ ಹರೆಯದಲ್ಲಿ ಅಂದರೆ ೧೯೮೯ರಲ್ಲಿ ನಿಧನರಾದರು.
ಸಂಸ್ಕೃತ ವೇದಗಳ ಅಧ್ಯಯನ ಬೋಧನೆಗಳಿಂದ ಅಪಾರ ಶಿಷ್ಯವೃಂದವನ್ನು ಹೊಂದಿದವರು ಶ್ರೀಕಂಠ ಘನಪಾಠಿಗಳು. ಶ್ರೀ ಶ್ರೀಕಂಠೇಶ್ವರಸ್ವಾಮಿಯ ದೇವಾಲದಲ್ಲಿಯೂ ಸೇವೆ ಸಲ್ಲಿಸಿದ ಇವರು ತಮ್ಮ ವಿದ್ವತ್‌ಗಾಗಿ ಶೃಂಗೇರಿಯ ಶಂಕರಮಠ, ಕಂಚಿಯ ಕಾಮಕೋಟಿ ಪೀಠಗಳಿಂದ ಪುರಸ್ಕರಿಸಲ್ಪಟ್ಟಿದ್ದರು. ಅಂತೆಯೇ ಸಂಸ್ಕೃತ ಕ್ಷೇತ್ರದಲ್ಲಿನ ಸಾಧನೆಗಾಗಿ ಭಾರತ ಸರ್ಕಾರ ೧೯೯೭ರಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿತು. ರಾಜ್ಯ ಸರ್ಕಾರದ ಪ್ರಶಸ್ತಿಗೂ ಭಾಜನರಾಗಿದ್ದ ಶ್ರೀಕಂಠ ಘನಪಾಠಿಗಳು ೧೯೧೪ರಲ್ಲಿ ನಂಜುಂಡಶಾಸ್ತ್ರೀ ಹಾಗೂ ಪಾರ್ವತಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ೨೦೦೩ರಲ್ಲಿ ಇವರು ನಿಧನರಾದರು.
ನಂಜನಗೂಡಿನ ಕೀರ್ತಿಪತಾಕೆಯನ್ನು ಉತ್ತುಂಗಕ್ಕೆ ಏರಿಸಿದವರಲ್ಲಿ ಮತ್ತೊಬ್ಬರು ಚಲನಚಿತ್ರದ ದಿಗ್ಗಜ ಜಿ.ವಿ. ಅಯ್ಯರ್. ೧೯೧೭ರಲ್ಲಿ ಜನಿಸಿದ ಇವರು ಬಾಲ್ಯದಲ್ಲಿಯೇ ರಂಗಭೂಮಿಯ ಕಡೆಗೆ ಆಕರ್ಷಿತರಾಗಿ ಗುಬ್ಬಿ ವೀರಣ್ಣ ಕಂಪನಿ ಸೇರಿದರು. ಅಲ್ಲಿ ಸುಭದ್ರ ಪರಿಣಯ ನಾಟಕದ ಮೂಲಕ ಬಣ್ಣ ಹಚ್ಚಲಾರಂಭಿಸಿದರು. ತರುವಾಯ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಸಾಹಿತಿಯಾಗಿ ಪ್ರಸಿದ್ಧಿಗಳಿಸಿದರು. ಸದಾ ತಮ್ಮ ಕಾರ್ಯದಲ್ಲಿ ಹೊಸತನ ಇರಬೇಕೆನ್ನುವ ಚಿಂತನೆಯನ್ನು ಹೊಂದಿದ್ದ ಜಿ.ವಿ. ಅಯ್ಯರ್ ಅವರು ಸಂಸ್ಕೃತದಲ್ಲಿ ಆದಿಶಂಕರಾಚಾರ್ಯ ಸಿನಿಮಾ ಮಾಡಿದರು. ತರುವಾಯ ಮಧ್ವ, ರಾಮಾನುಜರನ್ನು ಬೆಳ್ಳಿ ತೆರೆಗೆ ತಂದರು. ೧೯೮೩ರಲ್ಲಿ ಶಂಕರಾಚಾರ್ಯರ ಕುರಿತ ಚಲನಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿಯಿಂದ ಪುರಸ್ಕೃತರಾದರು. ವಂಶವೃಕ್ಷ, ಹಂಸಗೀತೆ, ಭಗವದ್ಗೀತೆ ಕುರಿತ ಚಿತ್ರಗಳಿಗೂ ರಾಷ್ಟ್ರ ಪುರಸ್ಕಾರ ಪಡೆದ ಅಯ್ಯರ್ ಅವರು ಒಟ್ಟು ಆರು ರಾಷ್ಟ್ರೀಯ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿರುವರು.
ತಮ್ಮ ಹಲ್ಲುಪುಡಿ ಹಾಗೂ ಆಯುರ್ವೇದಿಂದ ಔಷಧಿಗಳ ಮೂಲಕ ನಂಜನಗೂಡಿನ ಹೆಸರನ್ನು ಜಗತ್ಪ್ರಸಿದ್ಧಗೊಳಿಸಿದವರು ಬಿ.ವಿ. ಪಂಡಿತರು. ಅವರ ಪುತ್ರರುಗಳಲ್ಲಿ ಒಬ್ಬರೆ ಬಿ.ವಿ. ಶ್ರೀಕಂಠನ್. ನಮ್ಮ ದೇಶದ ಪ್ರಸಿದ್ಧ ಭೌತವಿಜ್ಞಾನಿಗಳಲ್ಲಿ ಒಬ್ಬರಾದ ಶ್ರೀಕಂಠನ್ ಅವರು ೧೯೨೫ರಲ್ಲಿ ಜನಿಸಿದರು. ತಮ್ಮ ವಿಶ್ವಕಿರಣ, ಎಲಿಮೆಂಟರಿ ಪಾರ್ಟಿಕಲ್ಸ್, ಪ್ರೋಟಾನ್ ಡಿಕೆ, ಹೈಎನರ್ಜಿ ಎಕ್ಸರೇ ಕುರಿತ ಸಂಶೋಧನೆಗಳಿಂದ ವಿಜ್ಞಾನ ಪ್ರಪಂಚದಲ್ಲಿ ಚಿರಪರಿಚಿತರಾಗಿರುವರು. ಮುಂಬೈನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಕಂಠನ್ ಅವರ ಹಲವು ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ. ಭಾರತ ಸರ್ಕಾರ ಖಭೌತವಿಜ್ಞಾನ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಗುರುತಿಸಿ ೧೯೮೮ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಲ್ಲದೇ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಭಾರತೀಯ ವಿಜ್ಞಾನ ಮಂದಿರದ ಅಲುಮ್ನಿ ಪ್ರಶಸ್ತಿಗಳಿಗೆ ಭಾಜನರಾದ ಇವರು ೨೦೧೯ರಲ್ಲಿ ಇನ್ನಿಲ್ಲವಾದರು.
೧೯೧೬ರಲ್ಲಿ ಕರ್ನಾಟಕ ನಂದಿನಿ ಪತ್ರಿಕೆಯನ್ನು ತಿರುಮಲಾಂಬಾ ಅವರು ಆರಂಭಿಸಿದರು. ಅಂದಿನಿಂದಲೇ ಪತ್ರಿಕೆಗೂ ನಂಜನಗೂಡಿಗೂ ಅವಿನಾಭಾವ ಸಂಬಂಧ ಏರ್ಪಟ್ಟಿತು ಎನ್ನಬಹುದು. ನಂತರ ಸನ್ಮಾರ್ಗದರ್ಶಿ, ಪರಿಮಳ ಮಾಸಿಕ ಮೊದಲಾದ ಪತ್ರಿಕೆಗಳು ಇಲ್ಲಿಂದ ಆರಂಭಗೊಂಡವು. ಇವು ಒಂದೆಡೆಯಾದರೆ ಮತ್ತೊಂದೆಡೆ ಈ ಪತ್ರಿಕಾರಂಗದಲ್ಲಿ ಮಹತ್ತರ ಸಾಧನೆಗೈದು ಸುಧಾ ವಾರಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿ ಪ್ರಸಿದ್ಧರಾದವರು ಇ.ಆರ್.ಸೇತೂರಾವ್. ನಂಜನಗೂಡಿನ ಇ ರಾಮರಾವ್ ಮತ್ತು ಸಾವಿತ್ರಮ್ಮ ದಂಪತಿಗಳ ಐವರು ಮಕ್ಕಳಲ್ಲಿ ಒಬ್ಬರಾದ ಸೇತೂರಾವ್ ಅವರು ೧೯೧೯ರಲ್ಲಿ ಜನಿಸಿದರು. ಪ್ರತಿವರ್ಷ ಭಾರತ ಸರ್ಕಾರ ನೀಡುವ ರಾಷ್ಟ್ರಪ್ರಶಸ್ತಿಗೆ ಇವರ ಸಂಪಾದಕತ್ವದ ಸುಧಾ ವಾರಪತ್ರಿಕೆ ಭಾಜನವಾದುದು ಅತ್ಯಂತ ಹೆಮ್ಮೆಯ ವಿಷಯ. ೧೯೫೬ರಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ ಸೇತೂರಾವ್ ಅವರು ಪತ್ರಿಕಾ ಕ್ಷೇತ್ರದಲ್ಲಿನ ತಮ್ಮ ಸುದೀರ್ಘ ಸೇವೆಗಾಗಿ ಟಿ.ಎಸ್.ಆರ್. ಪ್ರಶಸ್ತಿ ಮತ್ತು ಮೊಹರೆ ಹನುಮಂತರಾವ್ ಪತ್ರಿಕೋದ್ಯಮ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿರುವರು. ಖ್ಯಾತ ಸಾಹಿತಿ ನಾಟಕಕಾರ ಟಿ.ಪಿ. ಕೈಲಾಸಂ ಅವರ ಒಡನಾಡಿಯಾಗಿದ್ದ ಇವರು ೨೦೦೩ರಲ್ಲಿ ನಿಧನರಾದರು.
ಶಿಕ್ಷಣ ಕ್ಷೇತ್ರದಲ್ಲಿಯೂ ನಂಜನಗೂಡು ಸದಾ ಮುಂದು. ಸರ್ಕಾರಿ ಶಾಲಾ-ಕಾಲೇಜುಗಳ ಜೊತೆಗೆ ಜೆಎಸ್‌ಎಸ್ ಸೇರಿದಂತೆ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈ ತಾಲ್ಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿವೆ. ಇವುಗಳ ಮೂಲಕ ನಾಳಿನ ಪ್ರಜೆಗಳನ್ನು ರೂಪಿಸುವ ಕಾರ್ಯ ಅತ್ಯುತ್ತಮವಾಗಿ ನಡೆಯುತ್ತಿದೆ. ಇಂತಹ ಕಾಯಕದಲ್ಲಿ ನಿರತರಾದವರಲ್ಲಿ ಇಲ್ಲಿನ ಶಿಕ್ಷಕ ಎನ್.ಬಸವರಾಜ್ ಸಹ ಒಬ್ಬರು. ಆಶುಕವಿ ಹಾಗೂ ಶಿಕ್ಷಕ ನಾಗಣ್ಣಾಚಾರ್ ಮತ್ತು ನಾಗಮ್ಮ ದಂಪತಿಗಳ ಪುತ್ರರಾಗಿ ೧೯೪೪ರಲ್ಲಿ ಜನಿಸಿದ ಬಸವರಾಜ್ ಅವರು ೧೯೬೬ರಲ್ಲಿ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಸುವಾರು ೩೭ ವರ್ಷಗಳ ಕಾಲ ಸೇವೆ ಸಲ್ಲಿಸಿ ೨೦೦೨ರಲ್ಲಿ ನಿವೃತ್ತರಾದರು. ಈ ಅವಧಿಯಲ್ಲಿ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದರು. ಆ ಸಂದರ್ಭ ಬೋಧನೆಯ ಜೊತೆಗೆ ವಿದ್ಯಾರ್ಥಿಗಳ ಯಶಸ್ಸಿಗೆ ಇವರು ರೂಪಿಸಿದ ಹಲವು ಕಾರ್ಯಕ್ರಮಗಳು, ಶಾಲಾಭಿವೃದ್ಧಿಗೆ ಹಮ್ಮಿಕೊಂಡ ಕಾರ್ಯಗಳನ್ನು ಗುರುತಿಸಿ ರಾಜ್ಯ ಸರ್ಕಾರ  ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿತು. ಕೇಂದ್ರ ಸರ್ಕಾರವು ೨೦೦೦ ನೇ ಇಸವಿಯಲ್ಲಿ ಇವರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತು. ಹೀಗೆ ನಂಜನಗೂಡಿನ ಕೀರ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರಮಟ್ಟಕ್ಕೆ ಬಸವರಾಜ್ ಅವರು ೨೦೦೫ರಲ್ಲಿ ನಿಧನ ಹೊಂದಿದರು.
ಸಾಹಿತ್ಯ ಕ್ಷೇತ್ರದಲ್ಲಿಯೂ ನಂಜನಗೂಡು ಬಹಳ ಹಿಂದಿನಿಂದಲೂ ಪ್ರಸಿದ್ಧಿಯನ್ನು ಪಡೆದಿದೆ. ಇದಕ್ಕೆ ತಮ್ಮ ವೈಚಾರಿಕ ಚಿಂತನೆ ಬರಹಗಳ ಮೂಲಕ ಮತ್ತಷ್ಟು ಶಕ್ತಿ ಬಲ ತುಂಬಿದವರು ಶ್ರೀ ದೇವನೂರು ಮಹದೇವ ಅವರು. ೧೯೪೮ರಲ್ಲಿ ಶ್ರೀ ನಂಜಯ್ಯ ಮತ್ತು ನಂಜಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಇವರು ವ್ಯಾಸಂಗದ ನಂತರ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದು ಕೃಷಿಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು. ಶ್ರೀಯುತರ ಬರಹಗಳು ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ ಬೆಳಕು ಕಂಡಿವೆ. ಇವರು ತಮ್ಮ ದ್ಯಾವನೂರು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮೊದಲಾದ ಕೃತಿಗಳ ಮೂಲಕ ಪ್ರಸಿದ್ಧರಾಗಿರುವರು. ಶ್ರೀಯುತರು ತಮ್ಮ ಕುಸುಮಬಾಲೆ ಕೃತಿಗೆ ೧೯೯೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಶ್ರೀ ಮಹದೇವ ಅವರ ಸಾಹಿತ್ಯ ಕ್ಷೇತ್ರದ ಸಾಧನೆಗೆ ಭಾರತ ಸರ್ಕಾರ ೨೦೧೧ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕ್ರೀಡಾಕ್ಷೇತ್ರದಲ್ಲಿ ನಂಜನಗೂಡಿನ ಹೆಸರನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದವರು ಶಂಕರ್‌ಅಯ್ಯರ್. ೧೯೫೨ರಲ್ಲಿ ಕೆ.ಆರ್. ರಾಮ್ಅಯ್ಯರ್ ಮತ್ತು ಕಾವಾಕ್ಷಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಇವರಿಗೆ ಒಮ್ಮೆ  ಕಡಕೊಳ ಬಳಿ ಅಪಘಾತವಾಯಿತು. ಅದರಲ್ಲಿ ಅವರ  ಒಂದು ಕಾಲು ಶಾಶ್ವತವಾಗಿ ಊನವಾಯಿತು. ಇದರಿಂದ ಧೃತಿಗೆಡದ ಅವರು ಏನನ್ನಾದರೂ ಸಾಧಿಸುವ ಛಲ ತೊಟ್ಟರು. ಅದರ ಪರಿಣಾಮವೇ ಅವರು ಅಂಗವಿಕಲರಿಗಾಗಿ ನಡೆಯುವ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಎಲ್ಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿದರು. ಅದರಲ್ಲಿಯೂ ಪ್ರಮುಖವಾಗಿ ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್ ಕ್ರೀಡಾಕೂಡ, ಪ್ಯಾರಾ ಒಲಂಪಿಕ್ಸ್ ಹೀಗೆ ಅಂತರಾಷ್ಟ್ರೀಯ ಮಟ್ಟದ ಹಲವು ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಲ್ಲದೇ ಪದಕವನ್ನು ತಂದರು. ಇವರ ಕ್ರೀಡಾ ಸಾಧನೆಗಾಗಿ ೨೦೦೧ರಲ್ಲಿ ಭಾರತ ಸರ್ಕಾರ ಇವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತು. ಭಾರತದ ರಿಸರ್ವ್ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಂಕರಅಯ್ಯರ್ ಅವರು ೨೦೧೮ರಲ್ಲಿ ನಿಧನರಾದರು. 
ಕನ್ನಡ ಸಾಹಿತ್ಯದ ವಿಮರ್ಶಾಲೋಕದಲ್ಲಿ ಉತ್ತಮ ಹೆಸರುಗಳಿಸಿರುವವರಲ್ಲಿ ಶ್ರೀ ಟಿ.ಪಿ. ಅಶೋಕ್ ಒಬ್ಬರು. ಇಂಗ್ಲಿಷ್ ಪ್ರಾಧ್ಯಾಪಕರಾದ ಇವರ ಕನ್ನಡದ ಸೇವೆ ಅನನ್ಯ. ಶ್ರೀಯುತರು ೧೯೫೫ರಲ್ಲಿ ನಂಜನಗೂಡಿನಲ್ಲಿ ಜನಿಸಿದರು. ವ್ಯಾಸಂಗದ ನಂತರ ಉಪನ್ಯಾಸಕರಾಗಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಶ್ರೀಯುತರ ಲೇಖನಿಯಿಂದ ಕಥನ ಭಾರತಿ, ಸಾಹಿತ್ಯ ಸಂಪರ್ಕ, ಕಾವ್ಯ ಪ್ರೀತಿ, ಕನ್ನಡ ಕಾದಂಬರಿ ಸೇರಿದಂತೆ ಹದಿನಾರು ಕೃತಿಗಳು ರಚಿಸಲ್ಪಟ್ಟಿವೆ. ಅವುಗಳಲ್ಲಿ ಸಾಹಿತ್ಯ ಸಂಪರ್ಕ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರವಾಗಿದೆ. ಇವರು ಕಥನ ಭಾರತಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಪುರಸ್ಕೃತರಾಗಿರುವರು. ಶ್ರೀಯುತರು ಶ್ರೀರಂಗ ಸಂಪುಟ-೧, ಕೆ.ವಿ ಸುಬ್ಬಣ್ಣನವರ ಆಯ್ದ ಬರಹಗಳು, ಎಂ.ಕೆ. ರಾವಾನುಜನ್ ನೆನಪಿನ ಸಂಪುಟ ಸೇರಿದಂತೆ ಎಂಟು ಕೃತಿಗಳನ್ನು ಸಂಪಾದಿಸಿರುವರು. ಅಲ್ಲದೇ, ರಿಕ್ತ ರಂಗಭೂಮಿ, ಓವರ್‌ಕೋಟ್, ಫಾದರ್ ಸೆರ್ಗಿಯಸ್ ಇವರ ಅನುವಾದ ಕೃತಿಗಳಾಗಿವೆ. ಹೀಗೆ ನಂಜನಗೂಡಿನ ಕೀರ್ತಿಯನ್ನು ರಾಷ್ಟ್ರ ಹಾಗೂ
ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಅಗ್ರಗಣ್ಯರಲ್ಲಿ ಇವರೆಲ್ಲ ಪ್ರಮುಖರಾಗಿರುವರು.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ