Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಎನ್‌ಟಿಎಂಎಸ್ ಶಾಲೆ ಉಳಿಸಲು ಆಗ್ರಹಿಸಿ ಮುಂದುವರಿದ ಹೋರಾಟ

ಮೈಸೂರು: ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮೈಸೂರು ಅರಸರು ಕಟ್ಟಿಸಿದ್ದ ಎನ್‌ಟಿಎಂಎಸ್ ಶಾಲೆ ಕಟ್ಟಡವನ್ನು ಕೆಡವಿ ಮಕ್ಕಳಿಗೆ ದ್ರೋಹ ಎಸಗಿರುವ ರಾಮಕೃಷ್ಣ ಆಶ್ರಮದವರು ಕೂಡಲೇ ಶಾಲೆಯನ್ನು ಮರು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಎನ್‌ಟಿಎಂಎಸ್ ಶಾಲೆ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮಂಗಳವಾರ ನಗರದ ಚಾಮುಂಡಿಪುರಂನಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನದ ಮುಂಭಾಗ ಜಮಾವಣೆಗೊಂಡ ಸಮಿತಿ ಸದಸ್ಯರು ರಾಮಕೃಷ್ಣ ಆಶ್ರಮದವರು ತಾವು ಹೇಳಿದಂತೆ ನಡೆದುಕೊಳ್ಳಬೇಕು ಎಂದು ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಜಮನೆತನದವರು ಬಡಮಕ್ಕಳಿಗಾಗಿ ನಿರ್ಮಿಸಿದ್ದ ಶಾಲೆಯನ್ನು ರಾಮಕೃಷ್ಣ ಆಶ್ರಮದವರು ಕೆಡವಿದ್ದಾರೆ. ಅದೇ ಸ್ಥಳದಲ್ಲಿ ಹೊಸದಾಗಿ ಶಾಲೆ ನಿರ್ಮಿಸುತ್ತೇವೆ ಎಂದು ಅನೇಕ ಪ್ರಮುಖರ ಮುಂದೆ ಭರವಸೆ ನೀಡಿದ್ದರು. ಆದರೂ ಅವರು ತಮ್ಮ ಒಪ್ಪಂದವನ್ನು ಮರೆತಿದ್ದಾರೆ ಎಂದರು.

ದೇಶದ ಒಳಿತಿಗಾಗಿ ತಮ್ಮ ಜೀವನ ಸವೆಸಿದ ತಗಡೂರು ರಾಮಚಂದ್ರ ರಾವ್ ಅವರ ತತ್ವ, ಆದರ್ಶಗಳು ರಾಮಕೃಷ್ಣ ಆಶ್ರಮದವರ ಮನಸ್ಸಿನ ಮೇಲೆ ಪರಿಣಾಮ ಬೀರಲಿ ಎಂಬ ಉದ್ದೇಶದಿಂದ ನಾವು ಅವರ ಹೆಸರಿನ ಉದ್ಯಾನದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ರಾಮಕೃಷ್ಣ ಆಶ್ರಮದವರು ತಮ್ಮ ಮಾತನ್ನು ಉಳಿಸಿಕೊಳ್ಳಲು ಈಗಲೂ ಅವಕಾಶವಿದೆ. ಅದೇ ಜಾಗದಲ್ಲಿ ಶಾಲೆ ಹಾಗೂ ಉಳಿದ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಿಸಿಕೊಂಡು ಶಾಲೆಯನ್ನು ಉಳಿಸಬೇಕು. ಇದರಿಂದ ಸ್ವಾಮಿ ವಿವೇಕಾನಂದರ ಆತ್ಮಕ್ಕೂ ಶಾಂತಿ ದೊರಕುತ್ತದೆ ಎಂದು ಹೇಳಿದರು.

ಸಮಿತಿ ಸಂಚಾಲಕ ಎಂ.ಮೋಹನ್ ಕುಮಾರ್‌ಗೌಡ, ರವೀಗೌಡ, ಕೃಷ್ಣ, ರವಿ, ಬಿ.ಮಹದೇವ್, ಬೆಟ್ಟೇಗೌಡ, ಜಿ.ಪ್ರಕಾಶ್, ಬಾಲಕೃಷ್ಣ ಸಂಗಾಪುರ, ಸ್ವಾಮಿ, ಸಿದ್ದಪ್ಪ, ಮುಂತಾದವರು ಹಾಜರಿದ್ದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ