ಚಾಮರಾಜನಗರ: ತಾಲ್ಲೂಕಿನ ಚೆನ್ನಪ್ಪನಪುರ ಗ್ರಾಮದ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ರಥದ ಚಕ್ರ ಮುರಿದು ಬಿದ್ದು, ರಥ ಉರುಳಿಬಿದ್ದ ಘಟನೆ ಮಂಗಳವಾರ ನಡೆದಿದೆ.
ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. ನಾಲ್ಕು ವರ್ಷಗಳ ಬಳಿಕ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಹಾಗೂ ಬೆಳ್ಳಿ ಕವಚಧಾರಣಾ ಮಹೋತ್ಸವ ನಡೆದಿತ್ತು.
ಮಂಗಳವಾರ ಮಧ್ಯಾಹ್ನ 12ಕ್ಕೆ ದೇವಾಲಯದ ಹೊರಾವರಣದಲ್ಲಿ ರಥೋತ್ಸವ ಆರಂಭವಾಯಿತು. ರಥ ಸಾಗಿ ದೇವಾಲಯದ ಗರ್ಭ ಗುಡಿಯ ಹಿಂಭಾಗ ಬಂದಾಗ ಮಧ್ಯಾಹ್ನ 12.30ರಲ್ಲಿ ಚಕ್ರದ ದೂರಿ ಹಾಗೂ ಬಲಗಡೆಯ ಚಕ್ರ ಮುರಿದು ರಥ ವಾಲಿಕೊಂಡಿತು.
ಆ ಸಂದರ್ಭದಲ್ಲಿ ಪೊಲೀಸರು ರಥದ ಅಕ್ಕಪಕ್ಕ ಇದ್ದ ನೂರಾರು ಜನರನ್ನು ಚದುರಿಸಿದರು. ರಥದ ಗೋಪುರವನ್ನು ಹಗ್ಗದ ಸಹಾಯದಿಂದ ಹಿಡಿದುಕೊಳ್ಳಲಾಗಿತ್ತು.
ಹಗ್ಗದ ಆಧಾರದಿಂದ ನಿಂತಿದ್ದ ರಥ, ಹಗ್ಗವನ್ನು ನಿಧಾನವಾಗಿ ಸಡಿಲ ಬಿಟ್ಟಾಗ ಕೆಳಕ್ಕೆ ಉರುಳಿತು.
ಪೊಲೀಸರು ಜನರನ್ನು ದೂರ ಚದುರಿಸಿದ್ದರಿಂದ ಯಾರಿಗೂ ಯಾವುದೇ ಅಪಾಯ ಆಗಲಿಲ್ಲ.ರಥೋತ್ಸವ ಅಪೂರ್ಣಗೊಂಡರೂ, ಬೆಳ್ಳಿ ಕವಚಧಾರಣೆ, ಸ್ವಾಮಿಯ ದರ್ಶನ ನಡೆದವು. ವಿವಿಧೆಡೆಗಳಿಂದ ಸಾವಿರಾರು ಜನರು ಪಾಲ್ಗೊಂಡಿದ್ದರು.
ಒಂದೆರಡು ತಿಂಗಳ ಹಿಂದೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ದೇವಾಲಯದ ರಥೋತ್ಸವದ ಸಂದರ್ಭದಲ್ಲೂ ರಥ ವೇಗವಾಗಿ ಚಲಿಸಿ, ಅವಘಡ ಸಂಭವಿಸಿತ್ತು.
ಇದಕ್ಕೂ ಮೊದಲು, ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.





