ಚಾಮರಾಜನಗರ: ರಾಜ್ಯ ಕಿವಿ, ಮೂಗು, ಗಂಟಲು ತಜ್ಞ ವೈದ್ಯರ ಸಂಘದ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ಡಾ.ಬಾಬು ಸೋಶಿಯಲ್ ವೆಲ್ ಫೇರ್ ಅಂಡ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಡಾ.ಎ.ಆರ್.ಬಾಬು ತಿಳಿಸಿದರು.
ಅ.೧೭, ೧೮, ೧೯ ರಂದು ಮಣಿಪಾಲದಲ್ಲಿ ನಡೆದ ದಕ್ಷಿಣ ಭಾರತದ (ಕೇರಳ, ತ.ನಾಡು, ಕರ್ನಾಟಕ, ಆಂಧ್ರ ಪ್ರದೇಶ) ಕಿವಿ, ಮೂಗು, ಗಂಟಲು ತಜ್ಞರ ಸಮಾವೇಶದ ನಂತರ ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ರಾಜ್ಯದ ಎಲ್ಲ ಹಿರಿಯ ಹಾಗೂ ಕಿರಿಯ ವೈದ್ಯರೆಲ್ಲರೂ ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಘದ ರಾಜ್ಯಾಧ್ಯಕ್ಷ ಸ್ಥಾನದ ಸೇವಾವಧಿ ಒಂದು ವರ್ಷವಾಗಿದ್ದು, ೨೦೨೩-೨೪ನೇ ಸಾಲಿಗೆ ಆಯ್ಕೆ ಮಾಡಿದ್ದಾರೆ. ರಾಜ್ಯದಲ್ಲಿ ೧೫೦೦ ಇಎನ್‌ಟಿ ತಜ್ಞರಿದ್ದಾರೆ. ಇಎನ್‌ಟಿ ಕ್ಷೇತ್ರದ ಸಂಶೋಧನೆಗಳ ಬಗ್ಗೆ ಕಿರಿಯ ವೈದ್ಯರಿಗೆ ಮತ್ತು ಸ್ನಾತಕೋತ್ತರ ಪದವೀಧರರಿಗೆ ತರಬೇತಿ ನೀಡಲಾಗುವುದು ಎಂದರು.
ಪ್ರತಿ ಜಿಲ್ಲೆಯಲ್ಲೂ ಇಎನ್‌ಟಿ ತಜ್ಞ ವೈದ್ಯರ ಸಂಘಗಳನ್ನು ಬಲಪಡಿಸಲಾಗುತ್ತದೆ. ಸಂಘದ ಮೂಲಕ ಗ್ರಾಮದ ಭಾಗದಲ್ಲೂ ಕಿವಿ, ಗಂಟಲು, ಮೂಗಿನ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇಎನ್‌ಟಿ ತಜ್ಞ ವೈದ್ಯರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದೇನೆ. ೨೦೦೪ರಲ್ಲಿ ನಡೆದ ರಾಜ್ಯ ಮಟ್ಟದ, ೨೦೧೬ ರಲ್ಲಿ ನಡೆದ ರಾಷ್ಟç ಮಟ್ಟದ ಇಎನ್‌ಟಿ ವೈದ್ಯರ ಸಮ್ಮೇಳನದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ ಎಂದರು.
ಗೋಷ್ಠಿಯಲ್ಲಿ ವೈದ್ಯರಾದ ಡಾ.ಬಿ.ಪಿ.ನಟರಾಜಮೂರ್ತಿ, ಡಾ.ನಂಜಪ್ಪ, ಡಾ.ಹರೀಶ್, ತಾಲೂಕು ಔಷಧಿ ವ್ಯಾಪಾರ ಸಂಘದ ಅಧ್ಯಕ್ಷ ಪ್ರಶಾಂತ್ ಹಾಜರಿದ್ದರು.





