Mysore
29
overcast clouds

Social Media

ಶುಕ್ರವಾರ, 19 ಜೂನ್ 2026
Light
Dark

ಸಾಧಕರ ಮನೆ ಬಾಗಿಲಿಗೇ ಹೋಗಿ ಪ್ರಶಸ್ತಿ ಕೊಡುವಂತಾಗಬೇಕು: ಕೋಟೆ ಎಂ.ಶಿವಣ್ಣ

ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸುವುದು ಕೆಟ್ಟ ಸಂಪ್ರದಾಯ

ಮೈಸೂರು: ನಿಜವಾದ ಸಾಧಕರನ್ನು ಸರ್ಕಾರವೇ ಗುರುತಿಸಿ, ಅವರ ಮನೆ ಬಾಗಿಲಿಗೇ ಹೋಗಿ ಪ್ರಶಸ್ತಿ ಕೊಡುವಂತೆ ಆಗಬೇಕು. ಅದರ ಹೊರತಾಗಿ ಅರ್ಜಿ ಕರೆದು ಪ್ರಶಸ್ತಿಕೊಡುವ ಪರಿಪಾಠ ಸರಿಯಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ  ಅಧ್ಯಕ್ಷ ಕೋಟೆ ಎಂ.ಶಿವಣ್ಣ ಆಶಿಸಿದರು.
ಕನ್ನಡ ಜಾನಪದ ಪರಿಷತ್ ಮೈಸೂರು ಜಿಲ್ಲಾ ಘಟಕದ ೬ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ನಗರದ ರೋಟರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಹಾಗೂ ವಿಶ್ವ ಬುಡಕಟ್ಟು ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವೆಂಬರ್ ೧ರಂದು ಅನೇಕರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕುತ್ತದೆ. ರಾಜ್ಯೋತ್ಸವ ಸಂದರ್ಭದಲ್ಲಿ ಸರ್ಕಾರ ಅರ್ಜಿ ಕರೆದು ಪ್ರಶಸ್ತಿ ನೀಡುವ ಪರಿಪಾಠ ಹೋಗಬೇಕು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಕಾಯಿಗಳಂತೆ ಸಾಧನೆ ಮಾಡುತ್ತಿರುವ ಅರ್ಹರಿಗೆ ಇದರಿಂದ ಪ್ರಶಸ್ತಿ ಕೈತಪ್ಪಿ, ಅರ್ಜಿ ಹಾಕಿಕೊಂಡು, ರಾಜಕಾರಣಿಗಳ ಶಿಫಾರಸು ಮಾಡಿಸಿಕೊಂಡವರಿಗೆ ಬಹುತೇಕ ರಾಜ್ಯೋತ್ಸವ ಪ್ರಶಸ್ತಿ ದೊರಕುವ ಪರಿಸ್ಥಿತಿ ನಿರ್ಮಾಣವಾಗಿದೆ, ಈ ಪರಿಪಾಠ ಹೋಗಬೇಕಾದರೆ. ಸರ್ಕಾರವೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ನಿಟ್ಟಿನಲ್ಲಿ ದುಡಿಯುತ್ತಿರುವ ಸಾಧಕರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಹೋಗಿ ಪ್ರಶಸ್ತಿ ನೀಡುವಂತಾಗಬೇಕು. ಸಾಧಕರನ್ನು ಸರ್ಕಾರವೇ ಗುರುತಿಸಿ ಗೌರವಿಸಿದಾಗ ಆ ಪ್ರಶಸ್ತಿಗೆ ಬೆಲೆ ಕಟ್ಟಲಾಗದು. ಆದರೆ, ಸಾಧಕರಿಗೆ ಪ್ರಶಸ್ತಿ ನೀಡಲು ಅರ್ಜಿ ಕರೆಯುವುದು ಕೆಟ್ಟ ಸಂಪ್ರದಾಯಎಂದರು.

ಇದೇ ಸಂದರ್ಭದಲ್ಲಿ ಜಾನಪದ ಕ್ಷೇತ್ರದ ಸಾಧಕರಾದ ಬಸವಣ್ಣ (ವೀರಗಾಸೆ), ಮಾದಮ್ಮ (ಸೋಬಾನೆ ಪದ), ಮಹದೇವಯ್ಯ (ಕಂಸಾಳೆ), ನಿಖಿಲ್ (ಡೊಳ್ಳು ಕುಣಿತ). ಬುಡಕಟ್ಟು ಕ್ಷೇತ್ರದ ಸಾಧಕರಾದ ಚೋಮಮ್ಮ, ಜೆ.ಡಿ.ಜಯಪ್ಪ, ತೋಲಯ್ಯ ಹಾಗೂ ಹರ್ಷ ಅವರುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜತೆಗೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಕೆ.ಆರ್. ನಗರ ಪುರಸಭಾಧ್ಯಕ್ಷ ಪ್ರಕಾಶ್, ಪ್ರೊ.ನಾಗಣ್ಣ, ಬಸವರಾಜು, ಸೋಮಶೇಖರ್,ಟಿ.ಎನ್.ಪುಟ್ಟರಾಜು, ಡಾ.ಪದ್ಮರಾಜ್ ಹಾಗೂ ಮರಿಯಯ್ಯ ಅವರುಗಳನ್ನು ಸನ್ಮಾನಿಸಲಾಯಿತು.
ಹಿರಿಯ ಪತ್ರಕರ್ತ ಅಂಶಿಪ್ರಸನ್ನಕುಮಾರ್, ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್.ಬಾಲಾಜಿ,ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಕಾವೇರಿ ಪ್ರಕಾಶ್, ಪ್ರಾಧ್ಯಾಪಕಿ ಎ.ಮಂಜುಳಾ, ಗಾಯಕ ಲಕ್ಷ್ಮೀರಾಮ್, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಸಿದ್ಧಪ್ಪ, ಬೆಟ್ಟೇಗೌಡ, ಬೋರೇಗೌಡ, ಮರಿದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!