Mysore
27
haze

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಅಪಾಯದ ಅಂಚಿನಲ್ಲಿ ಕುಕ್ಕರಹಳ್ಳಿ ಕೆರೆ

ಮಳೆಯಿಂದಾಗಿ ಕೆರೆಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಕೆರೆಯ ಏರಿ ಕುಸಿಯುವ ಭೀತಿ

ಮೈಸೂರು: ಅತಿಯಾದ ನಗರೀಕರಣದ ಪ್ರಭಾವದಿಂದಾಗಿ ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ ಅಪಾಯ ಎದುರಿಸುತ್ತಿದೆ. ಹೆಚ್ಚಿನ ಮಳೆಯಿಂದಾಗಿ ಕೆರೆಗೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿರುವುದರಿಂದ ಕೆರೆಯ ಏರಿ ಕುಸಿಯುವ ಭೀತಿ ಎದುರಾಗಿದೆ. ಇದರ ಪರಿಣಾಮ ಕಳೆದ ಎರಡು ದಿನಗಳಿಂದ ವಾಯು ವಿಹಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಕೆರೆಗೆ ಹರಿದುಬರುತ್ತಿರುವ ಹೆಚ್ಚುವರಿ ನೀರನ್ನು ಹೊರಬಿಡುವ ಕೆಲಸ ಮಾಡಲಾಗುತ್ತಿದೆ.


ಕುಕ್ಕರಹಳ್ಳಿ ಕೆರೆಗೆ ಕೋಡಿ ಇಲ್ಲದಿರುವುದು ಹಾಗೂ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಇಲ್ಲದಿರುವುದೇ ಸಮಸ್ಯೆ. ಈ ಹಿಂದೆ ಕೆರೆಯು ಹೆಚ್ಚುವರಿ ನೀರು ಸುಮಾರು ೨೭ ಕಿಮೀಯಷ್ಟು ಉದ್ದವಿದ್ದ ಪೂರ್ಣಯ್ಯ ನಾಲೆಯಲ್ಲಿ ಹರಿದುಹೋಗುತ್ತಿತ್ತು. ಆದರೆ, ಒತ್ತುವರಿಯಿಂದಾಗಿ ನಾಲೆ ಸಂಪೂರ್ಣ ಮುಚ್ಚಿ ಹೋಗಿರುವುದರಿಂದ ಸಮಸ್ಯೆ ಎದುರಾಗಿದೆ.
ದಶಕಗಳ ಹಿಂದೆ ಹುಣಸೂರು ರಸ್ತೆಯ ಪಡುವಾರಹಳ್ಳಿ ಭಾಗದಲ್ಲಿನ ಒಳ ಚರಂಡಿ ನೀರು ಕೆರೆಗೆ ಸೇರುತ್ತಿತ್ತಲ್ಲದೆ, ಜನರು ಕಸ, ಕೋಳಿ ಮಾಂಸದ ಅಂಗಡಿಗಳ ತ್ಯಾಜ್ಯವನ್ನೂ ತಂದು ಸುರಿಯುತ್ತಿದ್ದರಿಂದ ದುರ್ವಾಸನೆ ಬೀರುತ್ತಿತ್ತು. ಒಳ ಚರಂಡಿ ನೀರನ್ನು ತಪ್ಪಿಸಲು ೨೦೦೮ರಲ್ಲಿ ಅಂದಿನ ಸರ್ಕಾರ ಸುಮಾರು ೫ ಕೋಟಿ ರೂ. ಮಂಜೂರು ಮಾಡಿತ್ತು. ಈ ಹಣದಲ್ಲಿ ನಗರಪಾಲಿಕೆ ಹಾಗೂ ಮುಡಾ ವತಿಯಿಂದ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ೨ ಕೋಟಿ ರೂ. ಹಾಗೂ ಕಾರಂಜಿ ಕೆರೆ ಅಭಿವೃದ್ಧಿಗೆ ೩ ಕೋಟಿ ರೂ. ಬಳಸಿಕೊಂಡು ಒಳಚರಂಡಿ ನೀರು ಕೆರೆಯ ಒಡಲು ಸೇರಿ ಮಲಿನಗೊಳಿಸುವುದನ್ನು ತಪ್ಪಿಸಲಾಗಿದೆ.
ವಾಯುವಿಹಾರಕ್ಕೆ ಮುಕ್ತ: ನೀರು ಹೊರಹಾಕಲು ಕುಕ್ಕರಹಳ್ಳಿ ಕೆರೆಯ ಏರಿಯ ಮೇಲೆ ವಾಯುವಿಹಾರವನ್ನೇ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಇದೀಗ ಹೆಚ್ಚುವರಿ ನೀರನ್ನು ಹೊರಹಾಕಿ ಗುರುವಾರದಿಂದ ಕೆರೆ ಏರಿಯ ಒಂದು ಭಾಗವನ್ನು ವಾಯುವಿಹಾರಕ್ಕೆ ಮುಕ್ತಗೊಳಿಸಲಾಗಿದೆ.


ಐನೂರು ಎಕರೆಯಲ್ಲಿ ಅರ್ಧ ಭಾಗವೂ ಇಲ್ಲ
ಮೈಸೂರು ನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಮಹಾರಾಜರು ಕಟ್ಟಿಸಿದ್ದ ಕುಕ್ಕರಹಳ್ಳಿ ಕೆರೆ ಅಂದಿನ ಕಾಲಕ್ಕೆ ಸುಮಾರು ೫೦೦ ಎಕರೆ ಪ್ರದೇಶವನ್ನು ಒಳಗೊಂಡಿತ್ತು. ಆದರೆ, ಕಾಲ ಕ್ರಮೇಣ ಅಭಿವೃದ್ಧಿ ಕಾಮಗಾರಿಗಳ ಪರಿಣಾಮ ಕುಕ್ಕರಹಳ್ಳಿ ಕೆರೆಯ ಪ್ರದೇಶ ಸದ್ಯ ೨೫೦ ಎಕರೆ ಮಾತ್ರ ಇದ್ದು, ೧೦೯ ಎಕರೆ ಪ್ರದೇಶದಲ್ಲಿ ಮಾತ್ರ ನೀರು ನಿಂತಿದೆ.


ಗೇಟ್ ವಾಲ್ವ್ ನಿರ್ವಹಣೆ ಕೊರತೆ

ಮೈಸೂರು: ಕೆರೆಗೆ ಹೆಚ್ಚುವರಿಯಾಗಿ ಬಂದು ಸೇರುವ ನೀರನ್ನು ಹೊರಬಿಡಲು ಇರುವ ಗೇಟ್ ವಾಲ್ವ್ ನಿರ್ವಹಣೆ ಕೊರತೆಯಿಂದ ಕೆಟ್ಟು ನಿಂತಿದೆ. ಇದರ ಪರಿಣಾಮ ಹೆಚ್ಚುವರಿ ನೀರನ್ನು ಹೊರಹಾಕಲು ಹರ ಸಾಹಸ ಪಡುವಂತಾಗಿದೆ. ೧೫ ವರ್ಷಗಳ ಹಿಂದೆಯೂ ಇದೇ ರೀತಿಯ ಸಮಸ್ಯೆ ಎದುರಾಗಿದ್ದಾಗ ಹೊರಗಿನಿಂದ ಮೆಕ್ಯಾನಿಕ್ ಕರೆತಂದು ಸರಿಪಡಿಸಲಾಗಿತ್ತು. ಪ್ರತಿ ಆರು ತಿಂಗಳಿಗೊಮ್ಮೆ ಗೇಟ್‌ವಾಲ್ವ್‌ಗೆ ಆಯಿಲ್ ಹಾಕಿ ನಿರ್ವಹಣೆ ಮಾಡಿದಾಗ ಇಂತಹ ಸಮಸ್ಯೆ ತಲೆದೋರುವುದಿಲ್ಲ ಎನ್ನುತ್ತಾರೆ ತಜ್ಞರು.


ಕೆರೆ ಏರಿ ಬಹಳ ಹಳೆಯದು. ಜಾಗರೂಕತೆಯಿಂದ ಅದನ್ನು ನೋಡಿಕೊಳ್ಳಬೇಕು. ಪೂರ್ಣಯ್ಯ ನಾಲೆ ಸರಿ ಇದ್ದಿದ್ದರೆ ಕುಕ್ಕರಹಳ್ಳಿ ಕೆರೆಗೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಮುಖ್ಯವಾಗಿ ಜನರು ಮನಸ್ಸು ಮಾಡಿದರೆ ಕೆರೆಯನ್ನೂ ಉಳಿಸಬಹುದು. ಸುತ್ತಲಿನ ಪರಿಸರವನ್ನೂ ಕಾಪಾಡಿಕೊಳ್ಳಬಹುದು.
ಕೆ.ಎಂ.ಜಯರಾಮಯ್ಯ, ಪರಿಸರ ಪ್ರೇಮಿ

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!