ಮಳವಳ್ಳಿ: ಟ್ಯೂಷನ್‌ಗೆ ಹೋದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಅನಧಿಕೃತ ಟ್ಯೂಷನ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಲ್ಲದೆ, ಬಾಲಕಿಯ ಮೇಲೆ ಕೃತ್ಯ ಎಸಗಿದ ಆರೋಪಿ ಕಾಂತರಾಜು ಶಿಕ್ಷಕನೇ ಅಲ್ಲ ಮತ್ತು ಟ್ಯೂಷನ್ ಸೆಂಟರ್ ಅಧಿಕೃತವು ಅಲ್ಲ ಎಂಬ ಸಂಗತಿಯು ಬಯಲಾಗಿದೆ.
ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಸಂಸ್ಥೆಯ ಮೇಲ್ವಿಚಾರಕನಿಂದಲೇ ಅತ್ಯಾಚಾರ ನಡೆದಿತ್ತು. ಅಲ್ಲದೆ, ಆಕೆಯನ್ನು ಕೊಲೆ ಮಾಡಿ, ನೀರಿನ ಸಂಪ್ ಒಳಗೆ ಹಾಕಿ, ಆರೋಪಿ ವಿಕೃತಿ ಮೆರದಿದ್ದ. ಈ ಘಟನೆಯನ್ನು ಇಡೀ ಕರ್ನಾಟಕದ ಜನತೆ ಖಂಡಿಸುವ ಮೂಲಕ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದರು.
ಘಟನೆ ಬಳಿಕ ಶಿಕ್ಷಣ ಇಲಾಖೆ ಹೈ ಅಲರ್ಟ್ ಆಗಿದ್ದು, ಮಂಡ್ಯ ಜಿಲ್ಲೆಯಾದ್ಯಂತ ಇರುವ ಅಕ್ರಮ ಟ್ಯೂಷನ್ ಸೆಂಟರ್ ಪತ್ತೆಗೆ ಸುತ್ತೋಲೆ ಹೊರಡಿಸಿದ್ದಾರೆ. ಅನಧಿಕೃತ ಟ್ಯೂಷನ್ ಕಂಡು ಬಂದರೆ ಅಥವಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಿಕ್ಷಕರು ಟ್ಯೂಷನ್ ಮಾಡಿದ್ರೆ ಶಿಸ್ತುಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಶಿಕ್ಷಣ ಇಲಾಖೆ ಎಚ್ಚರವಹಿಸಿದೆ. ಅನುಮತಿ ಪಡೆಯದೆ ಟ್ಯೂಷನ್ ನಡೆಸಿದರೆ ಪ್ರಕರಣ ದಾಖಲಾಗುತ್ತದೆ ಎಂದು ಮಂಡ್ಯದಲ್ಲಿ ಡಿಡಿಪಿಐ ಜವರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಟ್ಯೂಷನ್‌ಗೆ ತೆರಳಿದ್ದ ಬಾಲಕಿ ಮೇಲೆ ಎರಗಿದ್ದ ಕೀಚಕ ಕಾಂತರಾಜು, ಜ್ಞಾನ ಕುಟೀರ ಟ್ಯೂಷನ್ ಸೆಂಟರ್‌ನಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಆದರೆ, ಆತ ಶಿಕ್ಷಕನೇ ಅಲ್ಲ ಎಂದು ವರದಿಯಲ್ಲಿ ಬಹಿರಂಗವಾಗಿದೆ. ಆತ ಓದಿದ್ದು ಕೇವಲ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ. ಇತ್ತ ಟ್ಯೂಷನ್ ಸೆಂಟರ್‌ಗೂ ಯಾವುದೇ ಅನುಮತಿಯು ಇಲ್ಲ. ಇಂತಹ ಟ್ಯೂಷನ್‌ಗಳ ಮೇಲೆ ಎಚ್ಚರ ವಹಿಸಿ.
-ಜವರೇಗೌಡ, ಡಿಡಿಪಿಐ





