ವೈವಾಹಿಕ ವ್ಯಾಜ್ಯಗಳು, ಜಾಮೀನು ವಿಷುಯಗಳ ವಿಚಾರಣೆ
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯ ವೈವಾಹಿಕ ವ್ಯಾಜ್ಯಗಳು ಮತ್ತು ಜಾಮೀನು ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಹಿವಾ ಕೊಹ್ಲಿ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನೊಳಗೊಂಡ ಮಹಿಳಾ ಪೀಠವನ್ನು ರಚಿಸಿದೆ.
ಪ್ರತಿ ಗುರುವಾರ ಇಂತಹ ೧೦ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಈ ಹಿಂದೆ ಸರ್ವೋಚ್ಚ ನ್ಯಾಯಾಲಯ ಹೇಳಿತ್ತು. ಅದಕ್ಕಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕೇವಲ ಮಹಿಳೆಯರನ್ನೇ ಹೊಂದಿರುವ ಈ ಪೀಠವನ್ನು ರಚಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿ ಪೂರ್ತಿ ಮಹಿಳಾ ನ್ಯಾಯಧೀಶರಿರುವ ಪೀಠ ರಚನೆಯಾಗುತ್ತಿರುವುದು ಇದು ಮೂರನೇ ಬಾರಿ. ಈ ದ್ವಿಸದಸ್ಯ ಪೀಠವು ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ಕೊಠಡಿ ಸಂಖ್ಯೆ ೧೧ ರಲ್ಲಿ ಕುಳಿತುಕೊಳ್ಳಲಿದೆ. ಜ್ಞಾನ್ ಸುಧಾ ಮಿಶ್ರಾ ಮತ್ತು ರಂಜನಾ ಪ್ರಕಾಶ್ ದೇಸಾಯಿ ಅವರಿದ್ದ ಮೊದಲ ಸರ್ವ ಮಹಿಳಾ ಪೀಠವನ್ನು ೨೦೧೩ ರಲ್ಲಿ ಸ್ಥಾಪಿಸಿತ್ತು. ೨೦೧೮ ರಲ್ಲಿ ನ್ಯಾಯಮೂರ್ತಿಗಳಾದ ಆರ್ ಭಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರ ದ್ವಿಸದಸ್ಯ ಪೀಠವನ್ನು ರಚಿಸಿತ್ತು.
ಪ್ರಸ್ತುತ ಈ ಪೀಠವು ವೈವಾಹಿಕ ವಿವಾದಗಳನ್ನು ಒಳಗೊಂಡ ೧೦ ವರ್ಗಾವಣೆ ಅರ್ಜಿಗಳು ಮತ್ತು ೧೦ ಜಾಮೀನು ಅರ್ಜಿಗಳ ವಿಚಾರಣೆ ನಡೆಸಲಿದೆ. ಈ ಪೀಠದಲ್ಲಿನ ವಿಚಾರಣೆಗಾಗಿ ಒಟ್ಟು ೩೨ ವಿಷಯಗಳನ್ನು ಪಟ್ಟಿಮಾಡಲಾಗಿದೆ. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಕೊಹ್ಲಿ, ಬಿ.ವಿ.ನಾಗರತ್ನ ಮತ್ತು ತ್ರಿವೇದಿ ಸೇರಿದಂತೆ ಮೂವರು ಮಹಿಳಾ ನ್ಯಾಯಾಧೀಶರಿದ್ದಾರೆ.