ಚಿತ್ರದುರ್ಗ ಜಿಲ್ಲೆ ಗೋಪನಹಳ್ಳಿ ಗ್ರಾಮದಲ್ಲಿ ದಾರುಣ ಘಟನೆ
ಚಿತ್ರದುರ್ಗ: ಒಂದೇ ಕುಟುಂಬದ ಮೂವರು ಮಹಿಳೆಯರು ವಿಷ ಕುಡಿದು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು ಗೋಪನಹಳ್ಳಿ ಗ್ರಾಮದ ದಲಿತ ಕಾಲೋನಿಯ ಮಂಗೇರ ತಿಪ್ಪಜ್ಜಿ (೭೦), ಮಾರಕ್ಕ (೪೫) ಮತ್ತು ದ್ಯಾಮಕ್ಕ(೪೩) ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬೆಳಿಗ್ಗೆ ಆದರೂ ಕೂಡ ಬಾಗಿಲು ತೆರೆಯದೆ ಇದ್ದಾಗ ಅಕ್ಕ ಪಕ್ಕದವರು ಕದ ತಟ್ಟಿದ್ದಾರೆ. ಕಿಟಕಿಯಿಂದ ನೀರು ಎರಚಿದರೂ ಎಚ್ಚರಗೊಳ್ಳದ ಕಾರಣ ರಾತ್ರಿ ವೇಳೆಗೆ ಚಳ್ಳಕೆರೆ ಪೋಲಿಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ಚಳ್ಳಕೆರೆ ಪೋಲಿಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಬಾಗಿಲು ಹೊಡೆದು ಒಳಗಡೆ ನೋಡಿದಾಗ ಮೂವರು ನೀರಿನಲ್ಲಿ ವಿಷ ಬೆರೆಸಿ ಕುಡಿದಿರುವುದು ತಿಳಿದು ಬಂದಿದೆ. ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.