ಅನೀಶ್ ತೇಜೇಶ್ವರ್ ಅಭಿನಯದ ʼಆರಾಮ್ ಅರವಿಂದಸ್ವಮಿʼ ಚಿತ್ರವು ನವೆಂಬರ್ ೨೨ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ನೋಡಲು ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಚಿತ್ರತಂಡದವರು ಒಂದು ಆಫರ್ ಇಟ್ಟಿದ್ದಾರೆ. ಚಿತ್ರದ ಟಿಕೆಟ್ ದರವನ್ನು ಇಳಿಸಲಾಗಿದ್ದು, ಬಿಡುಗಡೆಯಾದ ಮೊದಲ ಮೂರು ದಿನಗಳ ಕಾಲ, ಟಿಕೆಟ್ ದರ ಕೇವಲ ೯೯ ರೂ. ಇರುತ್ತದೆ. ಈ ಆಫರ್ ಕೇವಲ ಮೂರು ದಿನಗಳ ಕಾಲ ಮಾತ್ರ. ನ.೨೨ರಿಂದ ೨೪ರವರೆಗೂ ಟಿಕೆಟ್ ದರ ೯೯ ರೂ.ಗಳಿದ್ದು, ಸೋಮವಾರದಿಂದ (ನ.೨೫) ಬೆಲೆ ಮಾಮೂಲಿಯಂತಿರಲಿದೆ.
ಇತ್ತೀಚೆಗೆ ʼಆರಾಮ್ ಅರವಿಂದ ಸ್ವಾಮಿʼ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಿತು. ಈ ಕಾರ್ಯಕ್ರಮಕ್ಕೆ ಶ್ರೀಮುರಳಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಬದಲ್ಲಿ ಮಾತನಾಡಿದ ಶ್ರೀಮುರಳಿ, ʼನನಗೆ ಟೈಟಲ್ ತುಂಬಾ ಇಷ್ಟವಾಯಿತು. ಯಶಸ್ಸು ಸಿಕ್ಕ ಮೇಲೆ ಸೋಲು ಸಹಜ. ಅದೇ ರೀತಿ ಸೋಲು ಎದುರಿಸಿದ ಮೇಲೆ ಗೆಲುವು ಸಿಗುತ್ತದೆ. ಈ ನಿಜಾಂಶ ತಿಳಿದುಕೊಳ್ಳಬೇಕು. ಮೊದಲಿಗೆ ನಮಗೆ ತಾಳ್ಮೆ ಇರಬೇಕು. ʼಬಘೀರʼ ಆಗಿದ್ದು ಅದೃಷ್ಟದಿಂದಲ್ಲ, ಪರಿಶ್ರಮದಿಂದ. ಶ್ರಮದಿಂದ ಗೆಲುವು ಸಿಕ್ಕಿತು. ಗೆಲುವು ಕೊಡುವುದು ಅಭಿಮಾನಿಗಳು. ನಿಮಗೆ ಒಳ್ಳೆಯದಾಗುತ್ತದೆ. ಅದಕ್ಕಾಗಿ ಕಾಯಬೇಕುʼ ಎಂದರು.
ನಟ ಅನೀಶ್ ಮಾತನಾಡಿ, ʼಕಷ್ಟಪಡುತ್ತಿದ್ದರೆ ಒಂದಲ್ಲ ಒಂದು ದಿನ ಫಲ ಸಿಗುತ್ತದೆ ಎನ್ನುವುದಕ್ಕೆ ಮುರಳಿ ಒಳ್ಳೆಯ ಉದಾಹರಣೆ. ಚಿತ್ರರಂಗದಲ್ಲಿ ಒಬ್ಬರಿಗೊಬ್ಬರು ಬೆಂಬಲ ಕೊಡುವುದಿಲ್ಲ ಎಂಬ ಮಾತಿದೆ. ಶ್ರೀಮುರಳಿ ಯಾವತ್ತೂ ಬೆಂಬಲಕ್ಕೆ ನಿಂತಿದ್ದಾರೆ. ಇದು ನನ್ನ 12ನೇ ಸಿನಿಮಾ. ಚಿತ್ರರಂಗಕ್ಕೆ ಬಂದು ಅನೀಶ್ 14 ವರ್ಷವಾಯ್ತು ಎನ್ನುತ್ತಾರೆ. ನನಗೆ ಯಾವುದು ನೆನಪಿಲ್ಲ. 12ನೇ ಶುಕ್ರವಾರ ಎದುರಿಸ್ತಿದ್ದೇನೆ. ಅನೀಶ್ ನಟನೆ, ಡ್ಯಾನ್ಸ್, ಆಕ್ಷನ್ ಎಲ್ಲಾ ಚೆನ್ನಾಗಿ ಮಾಡಿದ್ದಾನೆ ಎನ್ನುತ್ತಾರೆ. ಈ ಪಯಣದಲ್ಲಿ ಏನು ಕಲಿತೆ ಎಂದರೆ, ನಾನು ಒಳ್ಲೆಯ ನಟ ಆಗಿರಬಹುದು. ಒಳ್ಳೆಯ ನಟ ಶುಕ್ರವಾರದ ಬಾಕ್ಸಾಫೀಸ್ ನಲ್ಲಿ ಸೋತರೆ ಕೆಟ್ಟ ನಟನಾಗುತ್ತಾನೆʼ ಎಂದರು.
ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿರುವ ಅನೀಶ್ ತೇಜೇಶ್ವರ್, ಈ ಬಾರಿ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ʼಆರಾಮ್ ಅರವಿಂದ ಸ್ವಾಮಿʼ ಚಿತ್ರದಲ್ಲಿ ನಟಿಸಿದ್ದಾರೆ. ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಅಂಡ್ ಗ್ಯಾಂಗ್’ ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಅಭಿಷೇಕ್ ಶೆಟ್ಟಿ, ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇಲ್ಲಿ ಅನೀಶ್‌ಗೆ ಮಿಲನಾ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಇಬ್ಬರು ನಾಯಕಿಯರು.
ʼಆರಾಮ್ ಅರವಿಂದ್ ಸ್ವಾಮಿʼ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಶಿವಸಾಗರ್ ಛಾಯಾಗ್ರಹನ ಮಾಡಿದ್ದರೆ. ‘ಅಕಿರ’ ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ ‘ಗುಳ್ಟು’ ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.





