ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು( ಫೆಬ್ರುವರಿ 1ರಂದು) ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಮಂಡಿಸಲಿರುವ ಬಜೆಟ್‌ನ್ನು ಮಧ್ಯಂತರ ಬಜೆಟ್ ಎಂದು ಪರಿಗಣಿಸಲಾಗುತ್ತದೆ. ಅಂದರೆ ಇದು ಇಡೀ ವರ್ಷಕ್ಕೆ ಅನ್ವಯ ಆಗುವುದಿಲ್ಲ. ಚುನಾವಣೆ ಮುಗಿದು ಹೊಸ ಸರ್ಕಾರ ಬಂದು ಹೊಸ ಬಜೆಟ್ ಮಂಡನೆ ಆಗುವವರೆಗೂ ಈ ಮಧ್ಯಂತರ ಬಜೆಟ್ ಹಣಕಾಸು ಬಳಕೆಗೆ ಕೀಲಿ ಒದಗಿಸುತ್ತದೆ.
ಹಿಂದೆಲ್ಲಾ ಫೆಬ್ರುವರಿ ತಿಂಗಳ ಕೊನೆಯ ಕಾರ್ಯದಿನದಂದು ಬಜೆಟ್ ಮಂಡನೆ ಆಗುತ್ತಿತ್ತು. ಬ್ರಿಟಿಷರ ಕಾಲದಿಂದ ಬಂದ ರೂಢಿಯನ್ನೇ ಮುಂದುವರಿಸಲಾಗಿತ್ತು. ಆದರೆ, ಕೆಲ ವರ್ಷಗಳ ಹಿಂದೆ ಬಜೆಟ್ ದಿನವನ್ನು ಫೆಬ್ರುವರಿ 1ಕ್ಕೆ ನಿಗದಿ ಮಾಡಲಾಗಿದೆ. ಏಪ್ರಿಲ್ನಿಂದ ಶುರುವಾಗುವ ಹಣಕಾಸು ವರ್ಷಕ್ಕೆ ಬಜೆಟ್ ಅಂಶಗಳನ್ನು ಅಳವಡಿಸಲು ಸಾಕಷ್ಟು ಸಮಯಾವಕಾಶ ಸಿಗುತ್ತದೆ.
ಈ ಬಾರಿಯದ್ದು ಮಧ್ಯಂತರ ಬಜೆಟ್ ಆದರೂ ಫೆಬ್ರುವರಿ ಒಂದಕ್ಕೆಯೇ ಇರುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬೆಳಗ್ಗೆ 11ಗಂಟೆಗೆ ಜಂಟಿ ಸದನದಲ್ಲಿ ಬಜೆಟ್ ಮಂಡಿಸುತ್ತಾರೆ. ಸಾಮಾನ್ಯವಾಗಿ ಬಜೆಟ್ ಭಾಷಣ ಎರಡೂವರೆಗೆ ಗಂಟೆ ಇರುತ್ತದೆ.
ಬಜೆಟ್ ಸಂಬಂಧಿತ ಪ್ರಮುಖ ಅಂಶಗಳು
ಜ. 24: ಹಲ್ವಾ ಕಾರ್ಯಕ್ರಮ
ಜ. 29: ಆರ್ಥಿಕ ಸಮೀಕ್ಷಾ ವರದಿ ಬದಲು ಆರ್ಥಿಕ ಪರಾಮರ್ಶೆ ವರದಿ
ಜ. 30: ಕೇಂದ್ರ ಸರ್ಕಾರದಿಂದ ಸರ್ವಪಕ್ಷ ಸಭೆ
ಜ. 31: ಬಜೆಟ್ ಸೆಷನ್ ಆರಂಭ, ರಾಷ್ಟ್ರಪತಿಗಳಿಂದ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ
ಫೆ. 1: ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮ್ ಅವರಿಂದ ಮಧ್ಯಂತರ ಬಜೆಟ್ ಮಂಡನೆ ಆರಂಭ
ಫೆ. 9: ಬಜೆಟ್ ಸೆಷನ್ ಮುಕ್ತಾಯ
ನಿರ್ಮಲಾ ಸೀತಾರಾಮನ್ ಬಜೆಟ್ ದಾಖಲೆ:
ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಎರಡನೇ ಮಹಿಳೆಯಾಗಿದ್ದಾರೆ. ಇಂದಿರಾ ಗಾಂಧಿ ಈ ಹಿಂದೆ ಬಜೆಟ್ ಮಂಡಿಸಿದ್ದರು.
ನಿರ್ಮಲಾ ಸೀತಾರಾಮನ್ ಈವರೆಗೆ ಐದು ಬಾರಿ ಬಜೆಟ್ ಮಂಡಿಸಿದ್ದಾರೆ. ಫೆ. 1ರಂದು ಅವರೇ ಮಾಡಿದರೆ ಆರನೇ ಬಜೆಟ್ ಮಂಡಿಸಿದ ದಾಖಲೆ ಬರೆಯಲಿದ್ದಾರೆ.
ಮೊರಾರ್ಜಿ ದೇಸಾಯಿ ಮಾತ್ರವೇ ಸತತ ಆರು ಬಜೆಟ್ ಮಂಡಿಸಿರುವುದು. ಐದು ಪೂರ್ಣ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದರು ಮೊರಾರ್ಜಿ. ಒಟ್ಟು ಅವರು 10 ಬಜೆಟ್ ಮಂಡನೆ ಮಾಡಿದ್ದರು.
ಯಶವಂತ್ ಸಿನ್ಹಾ, ಅರುಣ್ ಜೇಟ್ಲಿ, ಮನಮೋಹನ್ ಸಿಂಗ್, ಪಿ ಚಿದಂಬರಂ ಅವರು ಸತತವಾಗಿ ಐದು ಬಾರಿ ಬಜೆಟ್ ಮಂಡಿಸಿದ್ದರು. ನಿರ್ಮಲಾ ಸೀತಾರಾಮನ್ ಈ ದಾಖಲೆ ಸರಿಗಟ್ಟಿದ್ದಾರೆ.