Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಅಲಂಕಾರ

ಹನೂರು: ಭೀಮನ ಅಮವಾಸ್ಯೆ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಮಲೆ ಮಹದೇಶ್ವರ ಬೆಟ್ಟದ ದೇವಾಲಯದ ಆವರಣದಲ್ಲಿ ವಿವಿಧ ಬಗೆಯ ಫಲ ಪುಷ್ಪಗಳು ಹಾಗೂ ತರಕಾರಿಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ.

ಭೀಮನ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಎಣ್ಣೆ ಮಜ್ಜನ ಸೇವೆ ಸಂಪ್ರದಾಯದಂತೆ ವಿಶೇಷ ಪೂಜೆ ನೆರವೇರಿದ್ದು. ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಅಮಾವಾಸ್ಯೆಯ ಪೂಜೆಯಿದ್ದು ಶನಿವಾರ ಮುಂಜಾನೆಯಿಂದಲೇ ಹಾಲಿನ, ಅಭಿಷೇಕ, ಬಿಲ್ವಪತ್ರೆ , ಪಂಚಾಮೃತ ಅಭಿಷೇಕ ವಿಜೃಂಭಣೆಯಿಂದ ನೆರವೇರಿತು. ಸ್ವಾಮಿಗೆ ನೈವೇದ್ಯ ಅರ್ಪಿಸಿದ ನಂತರ ಮಹಾ ಮಂಗಳಾರತಿ ಮಾಡಲಾಯಿತು.

ಮಹದೇಶ್ವರರಿಗೆ ಹೂವಿನ ಅಲಂಕಾರ: ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಮಲೆ ಮಹದೇಶ್ವರ ದೇವಾಲಯದ ಒಳ ಆವರಣದಲ್ಲಿ ವಿವಿಧ ಬಗೆಯ ಫಲ ಪುಷ್ಪಗಳು, ಸೊರೆಕಾಯಿ, ಬದನೆಕಾಯಿ, ಕ್ಯಾರೆಟ್, ಗುಂಡು ಮೆಣಸಿನಕಾಯಿ , ಗೆಡ್ಡೆ ಕೋಸು, ಕುಂಬಳಕಾಯಿ, ತೆಂಗಿನಕಾಯಿ, ಮೈಸೂರು ಬದನೆಕಾಯಿ ಸೇರಿದಂತೆ ಇನ್ನಿತರ ತರಕಾರಿಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ತಮಿಳುನಾಡಿನ ಹೊಸೂರು ಗ್ರಾಮದ ಹೂವಿನ ವ್ಯಾಪಾರಿ ಎನ್ ರಮೇಶ್ ಎಂಬುವವರು ಹೂವಿನ ಅಲಂಕಾರ ಮಾಡಿದ್ದಾರೆ.

ಕಣ್ಮನ ಸೆಳೆಯುತ್ತಿರುವ ವಿದ್ಯುತ್ ದೀಪಾಲಂಕಾರ: ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಒಳ ಹಾಗೂ ಹೊರ ಆವರಣದಲ್ಲಿ ವಿನೂತನ ಮಾದರಿಯ ವಿದ್ಯುತ್ ದೀಪಗಳನ್ನು ಅಳವಡಿಸಿರುವುದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

೨೦ ವಾಟರ್ ಟ್ಯಾಂಕ್ ಅಳವಡಿಕೆ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಜಾತ್ರಾ ಮಹೋತ್ಸವ ಅಮಾವಾಸ್ಯೆ ಹಾಗೂ ಹಬ್ಬ ಹರಿ ದಿನಗಳಲ್ಲಿ ಸಾವಿರಾರು ಜನರು ಆಗಮಿಸುವ ಹಿನ್ನೆಲೆ ದಾಸೋಹ ಭವನ, ರಂಗ ಮಂದಿರ, ದೇವಸ್ಥಾನದ ಒಳ ಆವರಣ ಸೇರಿದಂತೆ ಜನ ಹೆಚ್ಚು ಇರುವ ಕಡೆಗಳಲ್ಲಿ ಮಡಿಕೆ ಬದಲು 20 ಸ್ಟೀಲ್ ಟ್ಯಾಂಕ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.

ದಾಸೋಹ ಭವನದಲ್ಲಿ ಮೊಕ್ಕಂ ಹೂಡಿದ ಕಾರ್ಯದರ್ಶಿ: ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದ ಭೀಮನ ಅಮಾವಾಸ್ಯೆಗೆ ಸಾವಿರಾರು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆ ವಿಶೇಷ ಪ್ರಸಾದ ತಯಾರು ಮಾಡಲಾಗುತ್ತಿದೆ. ಈ ವಿಶೇಷ ಪ್ರಸಾದ ತಯಾರು ಮಾಡಲಾಗುತ್ತಿದ್ದು ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲು ಕಾರ್ಯದರ್ಶಿ ಎಇ ರಘು ದಾಸೋಹ ಭವನದಲ್ಲೀಯೇ ಮೊಕ್ಕಂ ಹೂಡಿದ್ದಾರೆ.

ಸಾವಿರಾರು ಜನರು ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ, ರುದ್ರಾಕ್ಷಿ ಮಂಟಪ, ಬಸವ ವಾಹನ ಮಹದೇಶ್ವರ ಹುಲಿ ವಾಹನ ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಹರಕೆ ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಹರಕೆ ಸಲ್ಲಿಸಿದ್ದಾರೆ.

ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವಂತಹ ಜನರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಮಾಡಿಕೊಳ್ಳಲಾಗಿದೆ. ಜನರೂ ಸಹ ಪ್ರಾಧಿಕಾರದ ಜೊತೆ ಕೈಜೋಡಿಸಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ಎಈ ರಘು
ಕಾರ್ಯದರ್ಶಿ
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ

Tags: