ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಪಾಪ್‍ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಸಪ್ತಮಿ ಗೌಡ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಚಿತ್ರದ ಮೂಲಕ ಧನಂಜಯ್‍ಗೆ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರು ಧನಂಜಯ್‍ಗೆ ನಾಯಕಿಯಾಗಿ ಇನ್ನೂ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಧನಂಜಯ್, ‘ಹಲಗಲಿ’ ಎಂಬ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿ ‘ಡಾಲಿ’ ಧನಂಜಯ್, ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಧನಂಜಯ್‍ಗೆ ನಾಯಕಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ.
ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧ ಮಾಡಿದ ಕನ್ನಡ ನೆಲದ ಹಲಗಲಿಯ ಊರಿನ ಬೇಡರ ಕುರಿತ ಸಿನಿಮಾ ಇದಾಗಿದೆ. ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ‘ಹಲಗಲಿ’ ಚಿತ್ರದ ಮೂಲಕ ತೆರೆ ಮೇಲೆ ತರಲಾಗುತ್ತಿದೆ.
‘ಹಲಗಲಿ’ ಚಿತ್ರದ ಮೂಲಕ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಪಕರಾಗುತ್ತಿದ್ದಾರೆ. ತಮ್ಮ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸಾಯಿ ಶ್ರೀರಾಮ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ ಮತ್ತು ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನವಿದೆ. ಈ ಚಿತ್ರವು ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.
‘ಹಲಗಲಿ’ ಚಿತ್ರವಲ್ಲದೆ, ತೆಲುಗಿನ ‘ತಮ್ಮುಡು’ ಎಂಬ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ನಿತಿನ್‍ಗೆ ನಾಯಕಿಯಾಗಿ ಅವರು ನಟಿಸುತ್ತಿದ್ದಾರೆ. ಇನ್ನು, ಕನ್ನಡದಲ್ಲಿ ಅಭಿಷೇಕ್ ಅಂಬರೀಷ್ ಅಭಿನಯದ ‘ಕಾಳಿ’ ಚಿತ್ರಕ್ಕೂ ಸಪ್ತಮಿ ನಾಯಕಿಯಾಗಿದ್ದರು. ಕೃಷ್ಣ ನಿರ್ದೇಶನದ ಈ ಚಿತ್ರದ ಮುಹೂರ್ತ ಸಹ ಆಗಿತ್ತು. ಆದರೆ, ಕಾರಣಾಂತರಗಳಿಂದ ಈ ಚಿತ್ರವು ನಿಂತಿರುವ ಸುದ್ದಿ ಬಂದಿದೆ.





