10ನೇ ತರಗತಿ ಅಥವಾ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಕೆಲವು ಇಲಾಖೆಗಳಲ್ಲಿನ ಗ್ರೂಪ್ ಡಿ ನೌಕರರ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದ್ದು, ಈ ಪದ್ಧತಿಯನ್ನು ರದ್ದು ಮಾಡಿ ಆ ಹುದ್ದೆಗಳ ನೇಮಕಾತಿಗೂ ಸ್ಪರ್ಧಾ ತ್ಮಕ ಪರೀಕ್ಷೆ ನಡೆಸಬೇಕಿದೆ.
ಸರ್ಕಾರ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತದೆ. ಆದರೆ ಗ್ರೂಪ್ ಡಿ ಸೇರಿದಂತೆ ಕೆಲವು ಹುದ್ದೆಗಳ ನೇಮಕಾತಿಗೆ ಮಾತ್ರ 10ನೇ ತರಗತಿ ಮತ್ತು ಪಿಯುಸಿಯಲ್ಲಿ ಗಳಿಸಿದ ಅಂಕಗಳನ್ನು ಆಧಾರವಾಗಿಟ್ಟು ಕೊಂಡು ನೇಮಕಾತಿ ಮಾಡಿಕೊಳ್ಳುತ್ತಿರುವುದರಿಂದ ಕಡಿಮೆ ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತಿದೆ.
ಕೇಂದ್ರ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್‌ಸಿ)ಯನ್ನು ಒಳಗೊಂಡಂತೆ ಬಹುತೇಕ ಎಲ್ಲ ಉನ್ನತ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ಕಡ್ಡಾಯವಾಗಿದೆ. ಇತ್ತೀಚೆಗೆ ಕೆಪಿಟಿಸಿಎಲ್‌ನ ವಿವಿಧ ಸರಬರಾಜು ನಿಗಮಗಳಲ್ಲಿನ ಕಿರಿಯ ಪರಿಚಾರಕ, ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಇಲ್ಲಿಯೂ ಅಂಕಗಳ ಮಾನದಂಡವನ್ನು ಕೈಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕಿದೆ.
-ಅನಿಲ್ ಕುಮಾರ್, ನಂಜನಗೂಡು ತಾ.





