ನವದೆಹಲಿ: ಯಾವುದೇ ಭಯೋತ್ಪಾದನೆಯನ್ನು ಭಾರತ ಯುದ್ಧ ಎಂದೇ ಪರಿಗಣಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು.
ಈ ಘಟನೆ ನಡೆಯುತ್ತಿದ್ದಂತೆ ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಸರ್ಕಾರ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದು, ಹಲವು ಮಂದಿ ಭಯೋತ್ಪಾದಕರು ಹಾಗೂ ಅವರ ಆಶ್ರಯ ತಾಣಗಳನ್ನು ಧ್ವಂಸ ಮಾಡಿದೆ.
ಭಾರತ-ಪಾಕ್ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪಾಕ್ ಮಾತ್ರ ನರಿ ಬುದ್ಧಿಯನ್ನು ಬಿಡುವ ಹಾಗೆ ಕಾಣುತ್ತಿಲ್ಲ. ಪದೇ ಪದೇ ಶೆಲ್ ದಾಳಿ ಮಾಡುತ್ತಿದ್ದು, ಕಾಶ್ಮೀರದಲ್ಲಿ ಅಮಾಯಕ ನಾಗರಿಕರ ಸಾವಿಗೆ ಕಾರಣವಾಗುತ್ತಿದೆ. ಇದರಿಂದ ರೊಚ್ಚಿಗೆದ್ದಿರುವ ಭಾರತೀಯ ಸೇನೆ ಪಾಕ್ ಮೇಲೆ ಕ್ಷಿಪಣಿ ದಾಳಿ ಮುಂದುವರಿಸಿದ್ದು, ಪಾಕ್ ಪತರುಗುಟ್ಟುವಂತೆ ಮಾಡಿದೆ.
ಈ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ಮೂರು ಸೇನಾಪಡೆ ಮುಖ್ಯಸ್ಥರ ಜೊತೆ ಹಾಗೂ ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸಿದ್ದು, ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಯೋತ್ಪಾದನೆ ವಿರುದ್ಧ ಭಾರತ ಸಮರ ಸಾರಿದೆ. ಯಾವುದೇ ಭಯೋತ್ಪಾದನೆಯನ್ನು ಭಾರತ ಯುದ್ಧ ಎಂದೇ ಪರಿಗಣಿಸುತ್ತದೆ ಎಂದು ಪಾಕಿಸ್ತಾನಕ್ಕೆ ಕಟು ಸಂದೇಶ ರವಾನೆ ಮಾಡಿದ್ದಾರೆ.





