ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ ಎಚ್ಚೆತ್ತುಕೊಂಡಿರುವ ನಗರ ಪೊಲೀಸರು, ವಿವಿಧೆಡೆ ರಾಸಾಯನಿಕ ತಯಾರಿಕಾ ಘಟಕಗಳ ಪರಿಶೀಲನೆಗೆ ಮುಂದಾಗಿದ್ದಾರೆ.
ಈ ಹಿಂದೆ ಮಹಾರಾಷ್ಟ್ರ ಪೊಲೀಸರ ತಂಡ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿತ್ತು. ನಂತರ ಎನ್‌ಸಿಬಿ ಪೊಲೀಸರು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಇದ್ದ ಶೆಡ್ ಮೇಲೆ ದಾಳಿ ನಡೆಸಿದ್ದರು. ಈ ಸಂಬಂಧ ಓರ್ವನ ಬಂಧನ ಕೂಡ ಆಗಿದೆ.
ಇದೀಗ ಎಚ್ಚೆತ್ತ ನಗರದ ಪೊಲೀಸರು ನಗರದಾದ್ಯಂತ ಇರುವ ಫಿನಾಯಿಲ್, ಡಿಟರ್ಜೆಂಟ್, ಆಸಿಡ್ ಇನ್ನಿತರ ರಾಸಾಯನಿಕ ತಯಾರಿಕಾ ಕೈಗಾರಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಶುಕ್ರವಾರ ಹೆಬ್ಬಾಳದಲ್ಲಿ ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದ್ದಾರೆ.
ಶ್ವಾನದಳದ ಯೋಧ, ಭೈರಾ, ದತ್ತ, ಲಿಯೋ, ಸಿಂಬಾ ಹಾಗೂ ಗರುಡ ಎಂಬ ಶ್ವಾನಗಳೊಂದಿಗೆ ಹೆಬ್ಬಾಳ್‌ನ ವಿವಿಧ ಘಟಕಗಳಿಗೆ ತೆರಳಿದ 6 ಮಂದಿ ಪೊಲೀಸರ ತಂಡ ಅಲ್ಲಿ ಶೇಖರಿಸಿಡಲಾಗಿದ್ದ ರಾಸಾಯನಿಕ ವಸ್ತುಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾ ಪೊಲೀಸರ ಪರಿಶೀಲನೆ
ಜಿಲ್ಲಾ ಪೊಲೀಸರು ಕೂಡ ಎಚ್ಚೆತ್ತಿದ್ದು, ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಮಿಕಲ್ ತಯಾರಿಕಾ ಘಟಕಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಇನ್‌ಸ್ಪೆಕ್ಟರ್ ಶೇಖರ್, ಬಾಂಬ್ ಪತ್ತೆದಳ, ಶ್ವಾನದಳದಿಂದ ರಾಸಾಯನಿಕ ತಯಾರಿಕಾ ಘಟಕಗಳ ಪರಿಶೀಲನೆ ನಡೆಸಲಾಗಿದೆ.
ಆರೋಪಿ ರಾಜಸ್ಥಾನಕ್ಕೆ
ಇದೇ ವೇಳೆ ಮಾದಕ ವಸ್ತು ಮಾರಾಟ ಆರೋಪದ ಮೇಲೆ ಬಂಧಿತನಾಗಿದ್ದ ಆಲನಹಳ್ಳಿ ನಿವಾಸಿ ಗಣಪತ್‌ಲಾಲ್‌ನನ್ನು ಎನ್‌ಸಿಬಿ ಪೊಲೀಸರು ಗುರುವಾರ ರಾತ್ರಿ ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಟ್ರಾವೆಲ್ ವಾರೆಂಟ್ ಮೂಲಕ ತೆರಳಿದ್ದಾರೆ.
ಮಾದಕ ವಸ್ತು ಮಾರಾಟ ಸಂಬಂಧ ಅಹಮದಾಬಾದ್‌ನಲ್ಲಿ ಮನೋಹರ್ ಬಿಷ್ಣೋಯಿ ಎಂಬಾತನ ಬಂಧನವಾಗಿತ್ತು. ಬಂಧಿತ ಗಣಪತಿಲಾಲ್ ಆತನ ಸಂಬಂಧಿಯಾಗಿದ್ದು, ಈ ಹಿನ್ನೆಲೆಯಲ್ಲಿ ಹೆಬ್ಬಾಳದ ಟುಕು ಟುಕು ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಮ್ಯಾನುಫ್ಯಾಕ್ಚರಿಂಗ್ ಘಟಕದ ಮೇಲೆ ಎನ್‌ಸಿಬಿ ಪೊಲೀಸರು ದಾಳಿ ನಡೆಸಿದ್ದರು.




