ಬೆಂಗಳೂರು: ಚುನಾವಣೆಯಲ್ಲಿ ಸೋಲು-ಗೆಲುವು ಸಹಜ, ಒಬ್ಬರು ಗೆಲ್ಲಬೇಕಾದರೆ ಮತ್ತೊಬ್ಬರು ಸೋಲಬೇಕಾಗುತ್ತದೆ. ರಾಜಕಾರಣದಲ್ಲಿ ಇದನ್ನು ನಮ್ಮ ಕುಟುಂಬ ಸಮಚಿತ್ತವಾಗಿ ಸ್ವೀಕರಿಸಿದ್ದೇವೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನ ಪುತ್ರ ನಿಖಿಲ್ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪರಾಜಿತನಾಗಿದ್ದೇನೆ. ಚುನಾವಣೆ ವ್ಯವಸ್ಥೆಯಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಅದನ್ನು ನಮ್ಮ ಕುಟುಂಬ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದು, ಗೆದ್ದಾಗ ಬೀಗಿಲ್ಲ ಸೋತಾಗ ಕುಗ್ಗಿಲ್ಲ. ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ. ಇದು ನನ್ನ ಮಗನಿಗೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ನನ್ನ ಮಗ ಮೂರು ಸಲ ಚುನಾವಣೆಯಲ್ಲಿ ಸೋತಿದ್ದಾನೆಯೇ ಹೊರತು, ಮನುಷ್ಯನಾಗಿ ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ. ಅವನ ತಾಯಿಯಾಗಿ ಮನಸ್ಸು ಮತ್ತು ಹೃದಯ ವೈಶಾಲ್ಯತೆ ಏನೆಂದು ನನಗೆ ಚೆನ್ನಾಗಿ ಗೊತ್ತು ಎಂದಿದ್ದಾರೆ.





