ಬೆಂಗಳೂರು: ಬಳ್ಳಾರಿ ಗಲಭೆಗೆ ಕಾರಣಕರ್ತರಾದ ಶಾಸಕ ನಾರಾ ಭರತ್‍ರೆಡ್ಡಿಯನ್ನು ದ್ವೇಷಭಾಷಣ ಕಾಯ್ದೆಯಡಿ ಬಂಧಿಸಿ ಸರ್ಕಾರ ಜೈಲಿಗೆ ಏಕೆ ಹಾಕಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ವಿಧಾನಮಂಡಲದ ಉಭಯಸದನಗಳಲ್ಲಿ ಅಂಗೀಕರಿಸಿರುವ ಕರ್ನಾಟಕ ದ್ವೇಷಭಾಷಣ ನಿಯಂತ್ರಣ ಕಾಯ್ದೆಯಡಿ ಬಂಧಿಸುವುದಾದರೆ ಮೊದಲು ನಾರಾ ಭರತ್‍ರೆಡ್ಡಿ ಆಪ್ತ ಸತೀಶ್‍ರೆಡ್ಡಿ ಹಾಗೂ ಅವರ ಬೆಂಬಲಿಗರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಸರ್ಕಾರ ಈ ಪ್ರಕರಣದಲ್ಲಿ ಯಾರನ್ನು ರಕ್ಷಣೆ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದ್ವೇಷಭಾಷಣ ವಿಧೇಯಕ ಬಿಜೆಪಿಯವರನ್ನು ಗುರಿಯಾಗಿಟ್ಟುಕೊಂಡು ಜಾರಿ ಮಾಡಲು ಸರ್ಕಾರ ಹೊರಟಿದೆ. ನಾವು ಮಾತನಾಡಿದರೆ ದ್ವೇಷಭಾಷಣ. ಹಾಗಾದರೆ ಕಾಂಗ್ರೆಸ್ ಶಾಸಕ ಬಳ್ಳಾರಿಗೆ ಬೆಂಕಿ ಹಚ್ಚುತ್ತೇನೆಂದು ಹೇಳುತ್ತಿರುವುದು ಶಾಂತಿ ಸಂದೇಶವೇ ಎಂದು ತರಾಟೆಗೆ ತೆಗೆದುಕೊಂಡರು.
ನಮ್ಮ ಗೃಹಸಚಿವರಾದ ಡಾ.ಜಿ.ಪರಮೇಶ್ವರ್‍ರವರಿಗೆ ಬೇರೆ ಯಾವುದೇ ವಿಚಾರಗಳೂ ಗೊತ್ತಿರುವುದಿಲ್ಲ. ಏನೇ ಕೇಳಿದರೂ ಗೊತ್ತಿಲ್ಲ ಎಂದು ಸಿದ್ಧಪಡಿಸಿದ ಉತ್ತರ ಕೊಡುತ್ತಾರೆ. ಆದರೆ ಬಳ್ಳಾರಿ ಎಸ್ಪಿ ಘಟನೆ ನಡೆದ ದಿನ ಕುಡಿದು ಮಲಗಿದ್ದರು ಎಂದು ಇವರಿಗೆ ಯಾರು ಹೇಳಿದ್ದರು? ಎಂದು ಪ್ರಶ್ನಿಸಿದರು.
ನಾರಾ ಭರತ್‍ರೆಡ್ಡಿಗೆ ಎಷ್ಟು ದುರಹಂಕಾರ ಎಂದರೆ ಇಡೀ ಬಳ್ಳಾರಿಗೇ ಬೆಂಕಿ ಹಚ್ಚುತ್ತೇನೆ ಎಂದು ಹೇಳುತ್ತಾರೆ. ಚಿಕ್ಕ ವಯಸ್ಸು, ರಾಜಕೀಯದಲ್ಲಿ ಬೆಳೆಯಲು ಇನ್ನೂ ಅವಕಾಶವಿತ್ತು. ಇಂತಹ ದುರಹಂಕಾರಿಗಳಿಗೆ ಸರ್ಕಾರ ಸರಿಯಾದ ಪಾಠ ಕಲಿಸಬೇಕೆಂದು ಒತ್ತಾಯಿಸಿದರು.





