ಬೆಂಗಳೂರು: ಯಾವುದೇ ಶಾಸಕರು ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ರಾಜ್ಯದಲ್ಲಿ ಜಾರಿ ಮಾಡಿರುವ ಎರಡು ಗ್ಯಾರಂಟಿಗಳನ್ನು ನಿಲ್ಲಿಸಬೇಕು ಎಂಬ ಶಾಸಕ ಗವಿಯಪ್ಪ ಹೇಳಿಕೆಗೆ ಗರಂ ಆದ ಡಿ.ಕೆ.ಶಿವಕುಮಾರ್ ಅವರು, ಯಾವುದೇ ಶಾಸಕರು ಹಾಗೂ ಕಾರ್ಯಕರ್ತರು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಬಾರದು ಎಂದು ಖಡಕ್ ಎಚ್ಚರಿಕೆ ಕೊಟ್ಟರು.
ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಾವು ಚುನಾವಣೆಗೂ ಮುಂಚೆ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೆವು. ಅವುಗಳನ್ನು ಈಗ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.
ಜನರಿಗೆ ನಾವು ಭರವಸೆ ಕೊಟ್ಟಿದ್ದೇವೆ. ಯಾರು ಅರ್ಹರಲ್ಲವೋ ಅವರನ್ನು ಪತ್ತೆ ಮಾಡುತ್ತೇವೆ. ಈಗ ಬಿಪಿಎಲ್ ಕಾರ್ಡ್ ಪರಿಶೀಲನೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.