ದಾವಣಗೆರೆ: ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂಬ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಶ್ರೀ ಹೇಳಿಕೆಗೆ ಟಾಂಗ್ ಕೊಟ್ಟ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸಿಎಂ ಸಿದ್ದು ಪರ ಬ್ಯಾಟ್ ಬೀಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಸ್ವಾಮೀಜಿಯವರು ಡಿಕೆಶಿ ಸಿಎಂ ಆಗಬೇಕು ಎಂದಿದ್ದಾರೆ. ಸ್ವಾಮೀಜಿಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಸಾಧ್ಯವಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಇದನ್ನು ನಾವುಗಳು ಕೂಡ ಹೇಳೋಕೆ ಸಾಧ್ಯವಿಲ್ಲ ಎಂದರು.
ಮುಂದುವರಿದು ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಹೆಚ್ಚುವರಿ ಡಿಸಿಎಂ ಸ್ಥಾನ ಸೃಷ್ಟಿಗೆ ಆಗ್ರಹ ಕೇಳಿಬರುತ್ತಿರುವ ಸಂಬಂಧ ಮಾತನಾಡಿದ ಅವರು, ಜಾತಿವಾರು ಡಿಸಿಎಂ ಕೇಳುತ್ತಿದ್ದಾರೆ. ಅದೆಲ್ಲಾ ಸುಮ್ಮನೆ ಆಗಲ್ಲ. ಏನೇ ಮಾಡಿದರೂ ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ರಾಜ್ಯ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದ್ದು, ಎಲ್ಲಾ ಶಾಸಕರು ಹಾಗೂ ಸಚಿವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ಕೇವಲ ಊಹಾಪೋಹ. ಇದನ್ನು ಯಾರೂ ಕೂಡ ನಂಬಬೇಡಿ ಎಂದು ಸ್ಪಷ್ಟನೆ ನೀಡಿದರು.





