Mysore
20
overcast clouds
Light
Dark

ರಾಜ್ಯದಲ್ಲಿ ಮೂರು ದಿನ ಮೋದಿ ಠಿಕಾಣಿ

ಬೆಳಗಾವಿ: ರಾಜ್ಯದಲ್ಲಿ ಮೊದಲನೇ ಹಂತದ ಮತದಾನ ಮುಗಿದಿದ್ದು, ಎರಡನೇ ಹಂತದ ಮತದಾನ ಮೇ‌ 7 ರಂದು ನಡೆಯಲಿದೆ.

ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಮೂರು‌ ದಿನ ಠಿಕಾಣಿ ಹೂಡಿ‌ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಬೇಟೆ ನಡೆಸಲಿದ್ದಾರೆ.

ಮೋದಿ ಅವರು ಇಂದು (ಏ.27) ರಾತ್ರಿ 8.50ಕ್ಕೆ ಬೆಳಗಾವಿಗೆ‌ ಆಗಮಿಸಿ, ನಗರದ ಐಟಿಸಿ ಹೋಟೆಲ್​​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಏ.28 ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ 11.55ಕ್ಕೆ ಬೆಳಗಾವಿಯಿಂದ ಶಿರಸಿಗೆ ಪ್ರಯಾಣಿಸಲಿದ್ದಾರೆ.

ಮಧ್ಯಾಹ್ನ 1ಕ್ಕೆ ಉತ್ತರ ಕನ್ನಡದ‌ ಶಿರಸಿ ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ನಂತರ ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ 4.05ಕ್ಕೆ ದಾವಣಗೆರೆಯಿಂದ ಹೊಸಪೇಟೆ ಕಡೆಗೆ ಹೊರಡುವ ಪ್ರಧಾನಿ ಮೋದಿ ಸಂಜೆ 4.50ಕ್ಕೆ ಹೊಸಪೇಟೆ ತಲುಪಲಿದ್ದಾರೆ. 5 ಗಂಟೆಗೆ ಹೊಸಪೇಟೆ ಸಮಾವೇಶದಲ್ಲಿ ಭಾಗಿಯಾಗಿ 6 ಗಂಟೆಗೆ ಅಲ್ಲಿನ ಹೋಟೆಲ್​ವೊಂದರಲ್ಲಿ ತಂಗಲಿದ್ದಾರೆ.

ಹೊಸಪೇಟೆಯಿಂದ ‌ಏಪ್ರಿಲ್ 29ರ ಬೆಳಗ್ಗೆ 11 ಗಂಟೆಗೆ ಮೋದಿ ನಿರ್ಗಮಿಸಿ, ಮಧ್ಯಾಹ್ನ 12.15ಕ್ಕೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆಯಲಿರುವ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಅಲ್ಲಿಂದ ಮಧ್ಯಾಹ್ನ 1.05ಕ್ಕೆ ಬಾಗಲಕೋಟೆಯಿಂದ ಸೊಲ್ಲಾಪುರಕ್ಕೆ ಹೊರಡಲಿದ್ದಾರೆ.