ಬೆಂಗಳೂರು : ಗಣೇಶೋತ್ಸವಕ್ಕೆ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರಸಂಗ ವಿಧಾನಪರಿಷತ್‍ನಲ್ಲಿ ನಡೆಯಿತು.
ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿಯ ಸುನಿಲ್ ವಲ್ಯಾಪುರ್ ಅವರು ವಿಷಯ ಪ್ರಸ್ತಾಪಿಸಿ ಗಣೇಶ ಉತ್ಸವಕ್ಕೆ ಕಲಬುರಗಿ ಜಿಲ್ಲಾಡಳಿತ ನಿರ್ಬಂಧ ಹಾಕಿದೆ. ಅನ್ಯಧರ್ಮಗಳ ಆಚರಣೆಗೆ ಇಲ್ಲದ ನಿರ್ಬಂಧ ನಮ್ಮ ಆಚರಣೆಗೆ ಏಕೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಎನ್.ರವಿಕುಮಾರ್, ಶಶಿಲ್ ನಮೋಶಿ, ಭಾರತಿ ಶೆಟ್ಟಿ ಮತ್ತಿತರ ಸದಸ್ಯರು, ಇದು ಕೇವಲ ಕಲಬುರಗಿಯಲ್ಲಿ ಮಾತ್ರ ಇಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಕಿಡಿಕಾರಿದರು.
ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ನಮ್ಮ ಹಬ್ಬಗಳಿಗೆ ಆಚರಣೆ ಮಾಡಲು ಜಿಲ್ಲಾಧಿಕಾರಿಗಳು ಇಲ್ಲವೇ ಬೇರೊಬ್ಬರು ಏಕೆ ಅನುಮತಿ ಕೊಡಬೇಕು. ಅದರಲ್ಲೂ ಕಲಬುರಗಿಯಲ್ಲಿ ವಿಭಿನ್ನವಾದ ಆಡಳಿತವಿದೆ. ಒಂದು ರೀತಿ ರಿಪಬ್ಲಿಕ್ ಆಫ್ ಕಲಬುರಗಿ ಇದೆ ಎಂದು ಪರೋಕ್ಷವಾಗಿ ಸಚಿವ ಪ್ರಿಯಾಂಕ ಖರ್ಗೆ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಬ್ರಿಟಿಷರ ಕಾಲದಲ್ಲೂ ಇಂತಹ ಪರಿಸ್ಥಿತಿ ಇರಲಿಲ್ಲ. ಗಣೇಶ ಉತ್ಸವವನ್ನು ನಮ್ಮ ಹಿಂದೂಗಳು ಶ್ರದ್ಧಾಭಕ್ತಿಯಿಂದ ಆಚರಿಸುತ್ತೇವೆ. ಇದು ನಮ್ಮ ಒಗ್ಗಟ್ಟಿನ ಸಂಕೇತ. ಇದಕ್ಕೆ ಏಕೆ ನಿರ್ಬಂಧ? ಮೊದಲು ತೆಗೆದುಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈಗಾಗಲೇ ಸಭಾನಾಯಕರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ನಾನು ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಸಭಾಪತಿ ಹೊರಟ್ಟಿಯವರು ಹೇಳಿದರು.
ಗಲಾಟೆಯ ಮಧ್ಯೆಯೇ ಸಿ.ಟಿ.ರವಿ ಮಾತನಾಡಿ, ಯಾವುದೋ ಒಂದು ಧರ್ಮದ ತುಷ್ಟೀಕರಣಕ್ಕಾಗಿ ನಮ್ಮ ಹಿಂದೂ ಧರ್ಮದ ಹಬ್ಬಗಳಿಗೆ ನಿರ್ಬಂಧ ಹಾಕಲಾಗುತ್ತಿದೆ. ನಿಮಗೆ ಬೇರೆ ಧರ್ಮದ ಹಬ್ಬಗಳಿಗೆ ಇದೇ ನಿರ್ಬಂಧ ಹಾಕುವ ತಾಕತ್ತು ಇಲ್ಲವೇ? ಎಂದು ಪ್ರಶ್ನಿಸಿದರು.
ಆಗ ಮತ್ತೆ ಸದನದಲ್ಲಿ ಕೋಲಾಹಲ ಉಂಟಾಗಿ ಯಾರು, ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯಲಿಲ್ಲ. ನಾನು ಈಗಾಗಲೇ ರೂಲಿಂಗ್ ಕೊಟ್ಟಿದ್ದೇನೆ. ಇದರ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸಭಾಪತಿಗಳು ಪುನರುಚ್ಚರಿಸಿದರು. ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾಗಲೇ ವಿಧಾನಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.





