Mysore
29
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೃಷ್ಣಮೂರ್ತಿ ಗಣಿಗನೂರರ ಜಾನಪದ ಸಾಧನೆ

ವಾಸು ವಿ.ಹೊಂಗನೂರು
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಪ್ರತಿ ರಾಜ್ಯದ ಮೂಲೆ ಮೂಲೆಯಲ್ಲಿಯೂ ಒಂದೊಂದು ವೈವಿದ್ಯಮಯ ಸಂಸ್ಕೃತಿಯನ್ನು ಕಾಣಬಹುದು. ನಮ್ಮ ಸಾಹಿತ್ಯ, ಸಂಸ್ಕೃತಿಯು ನಶಿಸಿಹೋಗುವ ಹಂತ ತಲುಪಿದ್ದು, ಜನರಿಂದ ದೂರಾಗಿರುವ ಜನಪದ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಮರುಪರಿಚಯಿಸುವ ಹಲವಾರು ಪ್ರಯತ್ನಗಳು ನಡೆಯುತ್ತಿವೆ.

ಇಂತಹದೊಂದು ಪ್ರಯತ್ನದಲ್ಲಿ ಜಾನಪದ ಕಲಾವಿದ ಕೃಷ್ಣಮೂರ್ತಿ ಗಣಿಗನೂರು ಅವರು ಶ್ರಮಿಸುತ್ತಿದ್ದು, ಜ್ಞಾನಕ್ಕಾಗಿ ವಿದ್ಯಾಭ್ಯಾಸ, ಜೀವನಕ್ಕಾಗಿ ಕೃಷಿ, ಸಂಸ್ಕೃತಿ ಹಾಗೂ ಸಮಾಜಕ್ಕಾಗಿ ಜಾನಪದ ಹಾಗೂ ಸಾಹಿತ್ಯ ಎಂದು ಜಾನಪದದ ಹಲವು ಮಜಲುಗಳಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಳ್ಳುತ್ತಾ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.

ಕಲೆ, ಸಾಹಿತ್ಯ, ಜಾನಪದಕ್ಕೆ ಹೆಸರುವಾಸಿಯಾಗಿರುವ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗಣಿಗನೂರು ಗ್ರಾಮದ ಶಿವನಂಜಯ್ಯ ಹಾಗೂ ಪೂರ್ಣಿಮಾ ದಂಪತಿ ಪುತ್ರ ಕೃಷ್ಣಮೂರ್ತಿ, ಬಾಲ್ಯದಿಂದಲೂ ಬಿಳಿಗಿರಿ ರಂಗನ ಕಥೆ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಹದೇಶ್ವರನ ಕಥೆಗಳನ್ನು ಕೇಳುತ್ತಾ ಜಾನಪದ ಗೀತೆ ಗಳನ್ನು ಹಾಡುತ್ತ ಬೆಳೆದ ಅಪ್ಪಟ್ಟ ಹಳ್ಳಿ ಸೊಗಡಿನ ಯುವಕ, ಜಾನಪದದ ತವರೂರು ಎಂಬಂತಿರುವ ಚಾಮರಾಜನಗರದಲ್ಲಿ ಹುಟ್ಟಿ ಬೆಳೆದ ಕೃಷ್ಣಮೂರ್ತಿಗೆ ಅಲ್ಲಿನ ವಾತಾವರಣವೇ ಅವರನ್ನು ಜಾನಪದದ ಲೋಕದೊಳಗೆ ಸೆಳೆದುಬಿಟ್ಟಿತು. ಅದರ ಪರಿಣಾಮ ಇಂದು ರಾಜ್ಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಮಹಾರಾಜ ಕಾಲೇಜಿನ ಜಾನಪದ ವಿಭಾಗದಲ್ಲಿ ಪದವಿ ಪಡೆದ ಕೃಷ್ಣಮೂರ್ತಿ ತಮ್ಮ ಮೂಲ ಸಂಸ್ಕೃತಿಯನ್ನು ನಾಡಿನಾದ್ಯಂತ ಪಸರಿಸುವ ಪಣ ತೊಟ್ಟಿದ್ದಾರೆ. ಶಿಕ್ಷಣದೊಂದಿಗೆ ಹಲವು ಜನಪದ ಪ್ರಕಾರಗಳಾದ ಜನಪದ ಗೀತೆ, ಡೊಳ್ಳು ಕುಣಿತ, ಪಟದ ಕುಣಿತ, ರಂಗ ಕುಣಿತ ಹಾಗೂ ಪೂಜಾ ಕುಣಿತ ಹೀಗೆ ಹಲವು ಕಲೆಗಳನ್ನು ಮೈಗೂಡಿಸಿಕೊಂಡಿದ್ದು, ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಕಣ್ಮರೆಯಾಗುತ್ತಿರುವ ಜಾನಪದ ಕಲಾ ಪ್ರಕಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಲೇಜು ಹಂತದಲ್ಲಿ ಜನಪದ ವಿಭಾಗದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿರುವ ಇವರು, ಮಹಾರಾಜ ಕಾಲೇಜನ್ನು ಪ್ರತಿನಿಧಿಸಿ ಏಳು ಬಾರಿ ರಾಜ್ಯಮಟ್ಟ, ನಾಲ್ಕು ಬಾರಿ ರಾಷ್ಟ್ರೀಯ ಮಟ್ಟ ಹಾಗೂ ಒಂದು ಬಾರಿ ಅಂತಾರಾಷ್ಟ್ರೀಯ ಮಟ್ಟದ ಕಲಾಮೇಳದಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸುವ ಮೂಲಕ ಜಾನಪದ ಲೋಕದಲ್ಲಿ ವಿಶೇಷವಾದ ಸಾಧನೆ ಮಾಡಿದ್ದಾರೆ.

ಸಾಹಿತ್ಯಾಸಕ್ತಿ ಬೆಳೆದದ್ದು ಹೀಗೆ:
ಅಪ್ಪಟ್ಟ ಹಳ್ಳಿ ಸೊಗಡಿನ ಈ ಯುವಕ ಪದವಿ ಗಳಿಸಿದ ಬಳಿಕ ತಮ್ಮ ಒಲವನ್ನು ಸಾಹಿತ್ಯದೆಡೆಗೆ ಬದಲಾಯಿಸಿಕೊಂಡರು. ದೇಮ (ದೇವನೂರ ಮಹಾದೇವ) ಅವರಿಂದ ಪ್ರಭಾವಿತರಾದ ಕೃಷ್ಣಮೂರ್ತಿ ತಮ್ಮ ಹಳ್ಳಿ ಸೊಗಡಿನಲ್ಲಿ ಪದ್ಯಗಳನ್ನು ಗೀಚಲು ಆರಂಭಿಸಿದರು. ಮುಂದೆ ಸಮಾಜದ ಒಳಿತು ಕೆಡಕುಗಳನ್ನು ಕುರಿತು ಸುದೀರ್ಘವಾಗಿ ತಮ್ಮ ಅಕ್ಷರ ಧಾಟಿಯ ಮೂಲಕ ಹೊರ ಹಾಕುವ ಪ್ರಯತ್ನ ಮಾಡತೊಡಗಿದರು.
ಸ್ತ್ರೀ ಶೋಷಣೆ, ಸಮಾಜವಾದ, ಮತೀಯವಾದ ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಸಾಹಿತ್ಯ ರಚಿಸಿ ಅಸಹನೆಯನ್ನು ಹೊರ ಹಾಕ ತೊಡಗಿದರು. ಸಮಾಜದಲ್ಲಿನ ಅಂಕು ಡೊಂಕುಗಳ ಬದಲಾವಣೆಗೆ ಬರವಣಿಗೆಯೇ ಅಸ್ತ್ರ ಎಂಬುದನ್ನು ಬಲವಾಗಿ ನಂಬಿರುವ ಅವರು, ಸೂಳೆ, ಜಂಡ ಮತ್ತು ಅಜೆಂಡಾ, ಅವನ್ಯಾರಮಾ, ಗಡಿ-ನುಡಿ, ಧರ್ಮದ ಜ್ಯೋತಿ, ಬೆಂಕಿ ಜ್ವಾಲೆಯಾದಾಗ ಹೀಗೆ ಹಲವಾರು ಕವಿತೆಗಳನ್ನು ರಚಿಸಿ ಗಮನ ಸೆಳೆದಿದ್ದಾರೆ. ಅವರ `ಮಡಿ-ಮುಟ್ಟು-ಮೈಲಿಗೆ’ ಕೃತಿಗೆ ಸುವರ್ಣ ಕರ್ನಾಟಕ ಕಣ್ಣಣಿ ರಾಜ್ಯ ಪ್ರಶಸ್ತಿ, ‘ಅಕ್ಕರೆಗೆ ಮತ್ತೊಂದು ಹೆಸರೇ ಅವಳು’ ಕೃತಿಗೆ ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿ, ‘ನಾನಿನ್ನೂ ಸತ್ತಿಲ್ಲ ಬದುಕಿದ್ದೇನೆ’ ಎಂಬ ಅವರ ತಂದೆ ಕುರಿತ ಲೇಖನಕ್ಕೆ ದ್ರೋಣಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಪದವಿ ಓದುವಾಗಿಂದಲೂ ಜೊತೆಯಲ್ಲಿಯೇ ಒಡನಾಟ ಇರುವ ನಮಗೆ ಕೃಷ್ಣಮೂರ್ತಿ ಅವರಲ್ಲಿ ವಿಶೇಷಾ ಕಲಾ ಆಸಕ್ತಿ ಇರುವುದು ಕಂಡುಬಂದಿತ್ತು. ಜಾನಪದವನ್ನು ಎಲ್ಲೆಡೆ ಪಸರಿಸುವ ಅವರ ಕೆಲಸಕ್ಕೆ ನಾವು ಸದಾ ಬೆಂಬಲವಾಗಿರುತ್ತೇವೆ.
-ಸಿದ್ದು ಜಂಗಮ, ಸ್ನೇಹಿತ.

ಕೃಷ್ಣಮೂರ್ತಿ ಒಬ್ಬ ಉತ್ತಮ ಕಲಾವಿದ ಹಾಗೂ ಯುವ ಕವಿ. ಜನಪದವನ್ನು ಬೆಳೆಸಿ ಉಳಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಳ್ಳೆಯ ಕೆಲಸಗಳಿಗೆ ಕೃಷ್ಣ ಅವರೊಂದಿಗೆ ಸದಾ ನಿಲ್ಲುತ್ತೇವೆ. ಅವರ ಈ ಕಾರ್ಯ ನಿರಂತರವಾಗಿ ಮುಂದುವರಿಯಲಿ.
– ವಿಶ್ವನಾಥ್ ಎಲ್.ಚಂಗಚಹಳ್ಳಿ, ಗುರುಗಳು.

ಯುವ ಸಮೂಹ ಮೊಬೈಲ್ ಹಾಗೂ ಪಾಶ್ಚಿಮಾತ್ಯದ ಗುಂಗಿನಲ್ಲಿ ಮುಳುಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳು ತ್ತಿದ್ದಾರೆ. ನಮ್ಮ ಜಾನಪದ ಸಾಹಿತ್ಯ, ಸಂಗೀತ, ಸಂಸ್ಕೃತಿ ಯನ್ನು ನಾವೇ ಬಳಸದೆ ಹೋದರೆ ಅದರ ಉಳಿವೆಲ್ಲಿ? ಇಂದಿನಿಂದಲೇ ಯುವ ಸಮೂಹ ಎಚ್ಚೆತ್ತುಕೊಂಡು ನಮ್ಮ ನಾಡು-ನುಡಿಯ ಬಗ್ಗೆ ಅಭಿಮಾನ ಹೊಂದಿ ಮುನ್ನೆಲೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ಇಲ್ಲದೇ ಹೋದಲ್ಲಿ ಪಕ್ಷದ ಇತರೆ ಭಾಷೆಗಳೇ ನಮ್ಮನ್ನು ನುಂಗಿ ಹಾಕಿ, ನಮ್ಮ ಅಸ್ತಿತ್ವವನ್ನೇ ನಾಶ ಮಾಡಿಬಿಡುತ್ತವೆ. ಈ ವಿಷಯದಲ್ಲಿ ಯುವ ಸಮೂಹ ಶೀಘ್ರ ಜಾಗೃತಗೊಳ್ಳಬೇಕಿದೆ.
– ಕೃಷ್ಣಮೂರ್ತಿ ಗಣಿಗನೂರು

ಸಂದ ಪ್ರಶಸ್ತಿಗಳು
2016ರಲ್ಲಿ ಉತ್ತರ ಪ್ರದೇಶದ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾನಿಲಯ ವತಿಯಿಂದ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ

2016ರಲ್ಲಿ ತಮಿಳುನಾಡಿನನಹಿಂದೂಸ್ಥಾನ್ ವಿಶ್ವವಿದ್ಯಾನಿಲಯದಿಂದ ರಾಷ್ಟ್ರೀಯ ಮಟ್ಟದ ಪ್ರಶಸ್ತಿ.

2017ರಲ್ಲಿ ಶಿವಾಜಿ ವಿಶ್ವವಿದ್ಯಾನಿಲಯ ದಿಂದ ರಾಷ್ಟ್ರೀಯ ಮಟ್ಟದ ಪ್ರಶಸ್ತಿ

2018ರಲ್ಲಿ ಜಾರ್ಖಂಡ್‌ನ ರಾಂಚಿ ವಿಶ್ವ ವಿದ್ಯಾನಿಲಯದಿಂದ ರಾಷ್ಟ್ರೀಯ ಮಟ್ಟದ ಪ್ರಶಸ್ತಿ.

2019ರಲ್ಲಿ ಯುವಜನೋತ್ಸವ ರಾಜ್ಯ ಮಟ್ಟದ ಪ್ರಶಸ್ತಿ.

2023ರಲ್ಲಿ ಸಂಗೊಳ್ಳಿ ರಾಯಣ್ಣ ರಾಜ್ಯ ಮಟ್ಟದ ಪ್ರಶಸ್ತಿ.

2024ರಲ್ಲಿ ಸುವರ್ಣ ಕರ್ನಾಟಕ ಕಣ್ಮಣಿ ರಾಜ್ಯ ಮಟ್ಟದ ಪ್ರಶಸ್ತಿ

 

Tags: