ತುಮಕೂರು: ಮಹಾರಾಷ್ಟ್ರ ಬಿಜೆಪಿ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳು ಜಾರಿಯಾಗಿಲ್ಲವೆಂದು ಸುಳ್ಳು ಜಾಹೀರಾತು ನೀಡಿತ್ತು. ಹೀಗಾಗಿ ಮಹಾರಾಷ್ಟ್ರದ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು (ನ.19) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಂತೆ ಸೂಚನೆ ನೀಡಿದ್ದು, ಆ ಪಕ್ಷದ ವಿರುದ್ಧ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಈ ಆದೇಶದ ಮೇರೆಗೆ ಇನ್ನೊಮ್ಮೆ ಜಾಹೀರಾತನ್ನು ಪರಿಶೀಲಿಸಿ ಮಾನನಷ್ಟ ಮೊಕದ್ದಮೆ ಕೇಸ್‌ನ್ನು ದಾಖಲಿಸಲಾಗುವುದು ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಮಹಾರಾಷ್ಟ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿಯು ಚುನಾವಣಾ ಪ್ರಚಾರದ ವೇಳೆ ಕರ್ನಾಟಕ ರಾಜ್ಯದ ಪಂಚ ಗ್ಯಾರಂಟಿಗಳನ್ನು ಸುಳ್ಳು ಗ್ಯಾರಂಟಿಗಳು ಎಂದು ಜಾಹೀರಾತು ನೀಡಿತ್ತು. ಅಲ್ಲದೇ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಜಾರಿಗೊಳಿಸಿಲ್ಲ. ಕೇವಲ ಕಾಂಗ್ರೆಸ್ ಸರ್ಕಾರ ಆ ರಾಜ್ಯದಲ್ಲಿ ಸುಳ್ಳು ಹೇಳುತ್ತಿದೆ ಎಂದು ಘೋಷಿಸಿತ್ತು. ಹೀಗಾಗಿ ಮಹಾರಾಷ್ಟ್ರದ ಸರ್ಕಾರ ಜಾಹೀರಾತು ನೀಡಿ ರಾಜ್ಯ ಸರ್ಕಾರವನ್ನು ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ವಿರುದ್ಧ ಕಾನೂನು ಕ್ರಮವನ್ನು ಜಾರಿಗೊಳಿಸಿದೆ.





