ಮೈಸೂರು: ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಮತ್ತು ಮಾಜಿ ಶಾಸಕ ಸಾರಾ ಮಹೇಶ್ ನಡುವಿನ ಆರೋಪ- ಪ್ರತ್ಯಾರೋಪಗಳು ತಾರಕ್ಕಕ್ಕೇರಿವೆ.
ʻಜಿಟಿಡಿ ಅವರನ್ನು ದೇವೇಗೌಡರು ಕರೆ ಮಾಡಿ ಕರೆದಿದ್ದರುʼ ಎಂಬ ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿಕೆಗೆ ಸೋಮವಾರ ತಿರುಗೇಟು ನೀಡಿದ ಜಿಟಿ ದೇವೇಗೌಡರು, ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಎಚ್.ಡಿ ದೇವೇಗೌಡರು ನನ್ನ ಕರೆದಿಲ್ಲ. ಕರೆದಿದ್ದೆ ಎಂದು ಅವರು ಹೇಳಿದರೆ, ನಾನು ಅಂದೇ ರಾಜಕಾರಣ ಬಿಟ್ಟು ಬಿಡುತ್ತೇನೆ ಎಂದರು.
ಸಾ.ರಾ ಮಹೇಶ್ ಸುಮ್ಮನೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸುಳ್ಳು ಹೇಳಿಕೊಂಡು ಪ್ರಮಾಣ ಮಾಡುತ್ತೇನೆ ಚಾಮುಂಡಿಬೆಟ್ಟಕ್ಕೆ ಬಾ, ಅಲ್ಲಿಗೆ ಬಾ ಅಂದರೆ ಹೋಗಲಾಗುತ್ತದೆಯೇ? ಎಂದು ಖಾರವಾಗಿ ಕೇಳಿದರು.
ಈ ಹಿಂದೆ ವಿಶ್ವಾನಾಥ್ ಜೊತೆ ಒಂದು ಬಾರಿ ಚಾಮುಂಡಿಬೆಟ್ಟಕ್ಕೆ ಹೋಗಿದ್ದಕ್ಕೆ ಏನಾಯಿತು ಎಂಬುದನ್ನು ಅವರ ನೆನಪಿನಲ್ಲಡಲಿ ಅವರಿಗಾದ ಹಾಗೇ ನನಗೂ ಹಾಗಬೇಕಾ ಎಂದು ವಾಗ್ದಾಳಿ ನಡೆಸಿದರು.
ಮುಂದುವರಿದು ಮಾತನಾಡುತ್ತಾ, ನಾನು ಯಾರ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಆಗತ್ಯ ಇಲ್ಲ. ಯಾರ ಬೆಂಬಲವಿಲ್ಲದೆಯೂ ಸ್ವಂತವಾಗಿ ನನಗೆ ರಾಜಕೀಯ ಮಾಡುವುದು ಗೊತ್ತು, ಸ್ವಂತ ರಾಜಕೀಯದಿಂದ ಇಲ್ಲಿಯವರೆಗೆ ಬಂದಿದ್ದೇನೆ ಯಾರ ಕತ್ತನ್ನು ಕೊಯ್ದಿಲ್ಲ ಎಂದು ಹೇಳಿದರು.
ಜೆಡಿಎಸ್‌ನಿಂದ ನನಗೆ ಹಲವು ಬಾರಿ ನೋವಾಗಿದೆ ಇದು ಹೊಸದೇನಲ್ಲ. ಪದೇ ಪದೇ ನೋವಾಗುವುದು ನನಗೆ ಕರಗತವಾಗಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಇನ್ನು ಸಿಎಂ ಇಬ್ರಾಹಿಂ ಭೇಟಿಯ ಕುರಿತು ಪ್ರತಿಕ್ರಿಯಿಸಿ ಜಿಟಿಡಿ, ಇಬ್ರಾಹಿಂಗೆ ಪ್ರಾದೇಶಿಕ ಪಕ್ಷ ಕಟ್ಟಬೇಕು ಅಂಬ ಆಸೆ ಇದೆ ಈ ಕುರಿತು ನನ್ನ ಜೊತೆ ಚರ್ಚಿಸಿದ್ದಾರೆ. ರಾಜ್ಯ ಪ್ರವಾಸ ಮುಗಿಸಿದ ನಂತರ ಈ ಕುರಿತು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.





