ಇಂಫಾಲ್: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಬಂಡುಕೋರರು ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳನ್ನು ಅಪಹರಿಸಿದ ಬೆನ್ನಲೇ, ಮೂವರು ಮಹಿಳೆಯರ ಮೃತದೇಹಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಆದರೆ, ಈ ಮೂವರು ಮೃತದೇಹಗಳು ಅಪಹರಣಕ್ಕೆ ಒಳಗಾದವರವೇ ಎಂಬುದು ಇನ್ನು ದೃಢಪಟ್ಟಿಲ್ಲ. ಆದಾಗ್ಯೂ ನಾಪತ್ತೆಯಾಗಿದ್ದವರ ಶೋಧಕಾರ್ಯ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಮೃತದೇಹಗಳು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದ ಆವರಣದಲ್ಲಿದ್ದ ನಿರಾಶ್ರಿತ ಶಿಬಿರದ ಆರು ಮಂದಿಯನ್ನು ಉಗ್ರರು ಅಪಹರಿಸಿದ್ದರು.
ಭದ್ರತಾ ಪಡೆಗಳು ಶೋಧಕಾರ್ಯ ನಡೆಸುತ್ತಿದ್ದು, ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ನೇತೃತ್ವ ವಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





