ಬೆಂಗಳೂರು: ಮೈಸೂರು ಮುಡಾ ಹಗರಣವನ್ನು ಸಿಬಿಐಗೆ ವಹಿಸಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಮುಡಾದಲ್ಲಿ ಕೇವಲ 14 ಸೈಟ್ಗಳಷ್ಟೇ ಅಲ್ಲ. ಬಡವರ ಸೈಟ್ ಕೂಡ ಲೂಟಿಯಾಗಿದೆ. ಮುಡಾದಲ್ಲಿ ಎರಡರಿಂದ ನಾಲ್ಕು ಸಾವಿರ ಕೋಟಿ ಅಕ್ರಮ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಆರೋಪಿಸಿದರು.
ಇನ್ನು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಗಳು ದಾಖಲೆಗಳಿಗೆ ವೈಟ್ನರ್ ಹಾಕುತ್ತಾರೆ. ಬಳಿಕ ದಾಖಲೆಗಳನ್ನೇ ಮಾಯ ಮಾಡುತ್ತಾರೆ. ಹೀಗಾಗಿ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಆಗ ಮಾತ್ರ ಮತ್ತಷ್ಟು ಹಗರಣ ಹೊರಬರುತ್ತದೆ. ಐಎಎಸ್ ಅಧಿಕಾರಿ ಫೈಲ್ ತೆಗೆದುಕೊಂಡು ಹೋಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಸಚಿವ ಭೈರತಿ ಸುರೇಶ್ ಕೂಡ ಎಷ್ಟು ಫೈಲ್ ತೆಗೆದುಕೊಂಡು ಹೋಗಿದ್ದಾರೋ ಆ ಬಗ್ಗೆ ಇಲ್ಲಿಯವರೆಗೂ ಮಾಹಿತಿಯೇ ದೊರೆತಿಲ್ಲ ಎಂದು ಕಿಡಿಕಾರಿದರು.
ಇನ್ನು ಮುಡಾ ಅಕ್ರಮ ರಕ್ಷಣೆಗೆ ಕೆಲ ಅಧಿಕಾರಿಗಳು ಮುಂದಾಗಿರುವುದು ಸರಿಯಾದ ಬೆಳವಣಿಗೆ ಅಲ್ಲ. ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಆಗ ಮಾತ್ರ ಎಲ್ಲಾ ಸತ್ಯಾಸತ್ಯತೆ ಹೊರಬರಲಿದೆ ಎಂದು ಆಗ್ರಹಿಸಿದರು.