ಕೊಳ್ಳೇಗಾಲ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮದುವೆಯ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಏಕಾಏಕಿ ದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಇದರಿಂದಾಗಿ ನಿಗದಿಯಾಗಿದ್ದ ಮದುವೆ ಕಾರ್ಯಕ್ರಮ ಸ್ಥಗಿತಗೊಂಡಿದೆ.
ಕುಣಗಳ್ಳಿ ಗ್ರಾಮದ ನಿವಾಸಿ ಎಲ್. ರವೀಶ್ (34) ಅವರು ಕೊಳ್ಳೇಗಾಲದ ವೆಂಕಟೇಶ್ವರ್ ಮಹಲ್‌ನಲ್ಲಿ ಜ.30ರಂದು (ಇಂದು) ನಡೆಯಬೇಕಿದ್ದ ಆರತಕ್ಷತೆಗೆ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಎಂಜಿಎಸ್‌ವಿ ಕಾಲೇಜು ರಸ್ತೆ ಬಳಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ, “ನೀನು ಮದ್ವೆ ಮನೆಗಲ್ಲ, ಸ್ಮಶಾನಕ್ಕೆ ತೆರಳಬೇಕು” ಎಂದು ಬೆದರಿಕೆ ಹಾಕಿ ಚಾಕು ಮತ್ತು ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಲ್ಲಿ ರವೀಶ್ ಅವರ ಎಡಗೈ ತೋಳಿಗೆ ಚಾಕು ಇರಿದು ರಕ್ತಸ್ರಾವವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದ್ದು, ಸದ್ಯ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಪ್ರೇಮ ಸಂಬಂಧದ ಶಂಕೆ
6 ತಿಂಗಳ ಹಿಂದೆಯಷ್ಟೇ ರವೀಶ್ ಅವರಿಗೆ ಹೊಸ ಅಣಗಳ್ಳಿ ಗ್ರಾಮದ ನಯನ ಎಂಬ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ವಧುವಿನ ಮಾಜಿ ಪ್ರೇಮಿ ಅಥವಾ ಸಂಬಂಧಿಕರೇ ಈ ದಾಳಿಗೆ ಕಾರಣರಾಗಿರಬಹುದು ಎಂದು ಪೊಲೀಸರು ಶಂಕಿಸುತ್ತಿದ್ದಾರೆ. ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.





