ಹಾವೇರಿ : ಜಾತಿಗಣತಿ ಬಗ್ಗೆ ಎಲ್ಲರಲ್ಲಿಯೂ ಗೊಂದಲ ಸೃಷ್ಟಿ ಮಾಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಾಗಿದೆ. ಜಾತಿ ಗಣತಿ ಬಿಡುಗಡೆ ಮಾಡಿದರೆ, ಮಾಡಿದ ದಿನವೇ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದು ಕೆ ಎಸ್ ಈಶ್ವರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಗೆಹರಿಯದ ಹಲವಾರು ಸಮಸ್ಯೆಗಳಿವೆ. ರಾಜ್ಯದ ಅಭಿವೃದ್ಧಿಗೆ ಸರ್ಕಾರದ ಕೊಡುಗೆ ಶೂನ್ಯವಾಗಿದೆ. ಕರ್ನಾಟಕ ಸರ್ಕಾರ ಹೈ ಕಮಾಂಡ್‌ನ ಎಟಿಎಂ ಆಗಿದೆ ಆದರೆ, ಕ್ಷೇತ್ರದ ಅಭಿವೃದ್ಧಿಗೆ ಹಣ ಮಾತ್ರ ಕೊಡುತ್ತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಡಿಕೆಶಿ ತನಿಖೆಯನ್ನು ಸಿಬಿಐ ಮುಂದುವರೆಸಲು ಯಾವುದೇ ಅಭ್ಯಂತರ ಇಲ್ಲ ಎಂದು ಹೈಕೋರ್ಟ್ ಹೇಳಿದೆ. ಡಿಕೆ ಶಿವಕುಮಾರ್ ಅವರು ಲೋಕಸಭಾ ಚುನವಾಣೆ ಮೊದಲು ಅಥವಾ ನಂತರ ಜೈಲಿಗೆ ಹೋಗುತ್ತಾರೆ. ಆದರೆ ಯಾವಾಗ ಹೋಗುತ್ತಾರೆ ಎಂಬುದು ತೀರ್ಮಾನವಾಗಬೇಕಿದೆ. ಅಕ್ರಮ ಹಣ ಸಂಪಾದನೆ ಮಾಡಿರುವುದು ಬಹಿರಂಗವಾಗಿದೆ. ಈ ಅಕ್ರಮದಲ್ಲಿ ಹಣ ಸಿಕ್ಕಿರುವ ಬಗ್ಗೆ ರಾಜ್ಯದ ಜನರೇ ನೋಡಿದ್ದಾರೆ. ಡಿಸಿಎಂ ಜೈಲಿಗೆ ಹೋಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ನುಡಿದರು.
ಹಿಂದಿನ ಬಿಜೆಪಿ ಸರ್ಕಾರ ಸಾಲ ಮಾಡಿದೆ ಅಂತ ಗೊತ್ತಿದ್ದರೂ ಬಡ ಜನರಿಗೆ ಮೋಸ ಮಾಡಲೆಂದೇ ಗ್ಯಾರಂಟಿಗಳನ್ನು ಯಾಕೆ ಘೋಷಣೆ ಮಾಡಿದ್ದೀರಾ ಎಂದು ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದರು.