ಮೈಸೂರು: ಬನ್ನಿ ಸಾರ್.. ಬನ್ನಿ ಮೇಡಂ.. ಮನೆಯಲ್ಲೇ ಮಾಡಿದ ಕೋಡುಬಳೆ ತಗೊಳ್ಳಿ.. ಮಜ್ಜಿಗೆ ಇದೆ ಕುಡೀರಿ.. ಕೊಬ್ಬರಿ ಮಿಠಾಯಿ ಬೇಕೇ.. ರವೆ ಉಂಡೆ ಇದೆ ತಗೊಳ್ಳಿ…
ಇದು ಕಂಡುಬಂದಿದ್ದು ರಂಗಾಯಣದಲ್ಲಿ. ‘ಚಿಣ್ಣರ ಮೇಳ’ದ ಕೊನೆಯ ದಿನವಾದ ಭಾನುವಾರ ಚಿಣ್ಣರಿ ಗಾಗಿ ಏರ್ಪಡಿಸಿದ್ದ ಸಂತೆಯಲ್ಲಿ ಅಕ್ಷರಶಃ ಪುಟಾಣಿಗಳು ತಾವೇ ತಯಾರಿಸಿದ ಪದಾರ್ಥಗಳನ್ನು ಸಂತೆಯಲ್ಲಿಟ್ಟು ಮಾರಾಟ ಮಾಡಿ ಸಾರ್ವಜನಿಕರ ಗಮನ ಸೆಳೆದರು.
ಚುರುಮುರಿ, ಹುರಿದ ಮಂಡಕ್ಕಿ, ಕೊಬ್ಬರಿ ಮಿಠಾಯಿ, ಚಕ್ಕುಲಿ ಕೋಡುಬಳೆ, ಬಿಡಿಸಿದ ಹಲಸಿನ ತೊಳೆ, ಸಣ್ಣಗೆ ಕುಯ್ಡು ಉಪ್ಪುಖಾರ ಸೇರಿಸಿದ ತೋತಾಪುರಿ ಮಾವು ಹೀಗೆ ನಾನಾ ಬಗೆಯ ತಿನಿಸುಗಳು ಸಂತೆಯಲ್ಲಿದ್ದವು. ಬಿಸಿಲಿನಿಂದ ಬಳಲಿದವರಿಗೆ ಮಜ್ಜಿಗೆ, ನಿಂಬೆ ಷರಬತ್ತು, ಖರ್ಬೂಜ ಜ್ಯೂಸ್ ಸಹಿತ ವಿವಿಧ ಪಾನೀ ಯಗಳನ್ನು ಸಂತೆಯಲ್ಲಿ ಇಡಲಾಗಿತ್ತು.
ಕೆಲವರು ಮನೆಯಿಂದಲೇ ರವೆ ಉಂಡೆ, ಚಕ್ಕುಲಿ, ಕುಕ್ಕೀಸ್ ಮೊದಲಾದ ತಿನಿಸುಗಳನ್ನು ಸಿದ್ಧಪಡಿಸಿ ಕೊಂಡು ತಂದಿದ್ದರು. ಇನ್ನೂ ಕೆಲವರು ಸ್ಥಳದಲ್ಲೇ ಒಂದಿಷ್ಟು ತಿನಿಸು ಸಿದ್ಧಪಡಿಸಿ ಸಂತೆಯಲ್ಲಿಟ್ಟರು. ಮಕ್ಕಳು ವ್ಯಾಪಾರಿಗಳಂತೆಯೇ ಕೂಗುತ್ತಾ, ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನ ಮಾಡಿದರು. ಪೋಷಕರೂ ಮಕ್ಕಳಿಗೆ ಸಾಥ್ ನೀಡಿದರು.





