Mysore
19
broken clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ಮಿನಿ ಬಸ್‌ಗಳ ವ್ಯವಸ್ಥೆ ಮಾಡಬಹುದಲ್ಲವೇ?

ಸರಗೂರು ತಾಲ್ಲೂಕಿನ ಕಾಳಿಹುಂಡಿ ಸೇರಿದಂತೆ ಚಿಕ್ಕದೇವಮ್ಮ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿದೆ.

ಚಿಕ್ಕದೇವಮ್ಮ ಬೆಟ್ಟ ಒಂದು ಪ್ರವಾಸಿ ತಾಣವಾಗಿದ್ದರೂ ಅದರ ಸುತ್ತಲಿನ ಗ್ರಾಮಗಳು ಮಾತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಈ ಗ್ರಾಮಗಳಿಗೆ ಬೆಳಿಗ್ಗೆ ಮತ್ತು ಸಂಜೆಯ ಸಮಯ ಬಿಟ್ಟರೆ ಇನ್ಯಾವುದೇ ಸಮಯದಲ್ಲಿಯೂ ಬಸ್‌ಗಳಿಲ್ಲ. ಕೆಲ ಗ್ರಾಮಗಳಿಗಂತೂ ಬಸ್‌ಗಳೇ ಇಲ್ಲದೆ, ಅಕ್ಕಪಕ್ಕದ ಊರುಗಳಿಗೆ ಹೋಗಿ ಬಸ್ ಹತ್ತಬೇಕಿದೆ. ಈ ಗ್ರಾಮಗಳ ನೂರಾರು ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಅನೇಕ ಮಂದಿ ಶಾಲಾ-ಕಾಲೇಜುಗಳು ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಎಚ್. ಡಿ. ಕೋಟೆ, ಸರಗೂರು ಹಾಗೂ ಮೈಸೂರಿಗೆ ಹೋಗಿಬರಬೇಕಿದೆ. ಆದರೆ ಈ ಗ್ರಾಮಗಳಲ್ಲಿ ಸರಿಯಾದ ಸಮಯಕ್ಕೆ ಬಸ್ ಸಿಗದೆ ಪ್ರಯಾಣಿಕರು ಪರಿತಪಿಸುವಂತಾಗಿದೆ.

ಪರೀಕ್ಷೆಯ ಸಮಯದಲ್ಲಂತೂ ವಿದ್ಯಾರ್ಥಿಗಳ ಪರದಾಟ ಹೇಳತೀರದು. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದರೂ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲು ಗ್ರಾಮಗಳ ರಸ್ತೆ ಸರಿಯಿಲ್ಲ, ಕಲೆಕ್ಷನ್ ಕಡಿಮೆ ಇದೆ ಎಂಬ ಕಾರಣ ನೀಡುತ್ತಾರೆ.

ನೆರೆಯ ತಮಿಳುನಾಡಿನಲ್ಲಿ ಕಲೆಕ್ಷನ್ ಕಡಿಮೆ ಇರುವ ಹಾಗೂ ಸಣ್ಣ ರಸ್ತೆಗಳನ್ನು ಹೊಂದಿರುವ ಗ್ರಾಮಗಳಿಗೆ ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯೂ ಕಡಿಮೆ ಯಾಗುವ ಜತೆಗೆ ಸಾರ್ವಜನಿಕರಿಗೂ ಅನುಕೂಲವಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾರವೂ ಇಂತಹ ಯೋಜನೆಗಳನ್ನು ಗ್ರಾಮೀಣ ಭಾಗಗಳಿಗೆ ಪರಿಚಯಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

-ಎನ್. ಹರೀಶ, ಟಿ. ಕೆ. ಬಡಾವಣೆ, ಮೈಸೂರು.

 

Tags: