Mysore
19
few clouds

Social Media

ಶನಿವಾರ, 31 ಜನವರಿ 2026
Light
Dark

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ : ತನಿಖೆಗೆ ಎಸ್‌ಐಟಿ ರಚನೆ

ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಛಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಶನಿವಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದೆ.

ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಆದೇಶ ಹೊರಡಿಸಿದೆ. ಈ ಎಸ್‌ಐಟಿ ಯಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕೂಡ ಇರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ.

ಈ ಸಂಬಂಧ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದರು. ಈಗ ಅಶೋಕ ನಗರ ಪೊಲೀಸರಿಂದ ಎಸ್‌ಐಟಿಗೆ ಕೇಸ್ ವರ್ಗಾವಣೆಯಾಗಲಿದೆ. ಕೇಸ್ ದಾಖಲೆ, ಸಾಕ್ಷ , ಎಫ್‌ಐಆರ್ ಪ್ರತಿ ಸೇರಿದಂತೆ ಎಲ್ಲವನ್ನೂ ಅಶೋಕ್ ನಗರ ಪೊಲೀಸರು ಎಸ್‌ಐಟಿ ಗೆ ವರ್ಗಾಯಿಸಲಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಹೊಸೂರು ರಸ್ತೆಯ ಲ್ಯಾಂಗ್ ಫರ್ಡ್ ಟೌನ್‌ನಲ್ಲಿರುವ ಕಾನ್ಛಿಡೆಂಟ್ ಗ್ರೂಪ್ ಕಂಪೆನಿಯಲ್ಲಿ ಶೋಧ ನಡೆಸುತ್ತಿದ್ದರು. ಈ ವೇಳೆ ರಾಯ್ ಅವರು ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಗುಂಡಿನ ದಾಳಿ ಘಟನೆ ಸಂಭವಿಸಿದೆ. ಮೇಲ್ನೋಟಕ್ಕೆ, ಕಾನ್ಛಿಡೆಂಟ್ ಗ್ರೂಪ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತೋರುತ್ತದೆ ಎಂದು ಸೀಮಂತ್ ಕುಮಾರ್ ಸಿಂಗ್ ಅವರು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದರು.

Tags:
error: Content is protected !!