ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯ ಬಂಗಲೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಸ್ಪಾಟ್‌ನಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐಟಿ ದಾಳಿ ಒತ್ತಡ?
ಇತ್ತೀಚಿಗೆ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್‌ಗೆ ಸಂಬಂಧಿಸಿದಂತೆ ಪದೇ ಪದೇ ದಾಳಿ ನಡೆಸುತ್ತಿದ್ದರು. ಇಂದು ಸಹ ದಾಳಿ ನಡೆಯುತ್ತಿದ್ದ ಸಮಯದಲ್ಲೇ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಪದೇ ಪದೇ ದಾಳಿಗಳು ಮತ್ತು ಸಂಬಂಧಿತ ತನಿಖೆಗಳಿಂದಾಗಿ ರಾಯ್ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ಯಾರು ಈ ಸಿ.ಜೆ. ರಾಯ್?
ಡಾ. ರಾಯ್ ಸಿ.ಜೆ. (ಡಾ. ರಾಯ್ ಚಿರಿಯಾಂಕಂದತ್ ಜೋಸೆಫ್) ಅವರು ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕರಾಗಿದ್ದು, ದಕ್ಷಿಣ ಭಾರತದ ಅಗ್ರಗಣ್ಯ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಬ್ಬರಾಗಿ ಹೆಸರುವಾಸಿಯಾಗಿದ್ದರು. ಬೆಂಗಳೂರು, ಕೇರಳ, ಯುಎಇ ಸೇರಿದಂತೆ ವಿವಿಧೆಡೆ ವ್ಯಾಪಾರ ವಿಸ್ತರಣೆ ಮಾಡಿದ್ದ ಕಂಪನಿ ಜೀರೋ-ಡೆಬ್ಟ್ ಮಾಡೆಲ್‌ನೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. ಅವರು ಸ್ಲೊವಾಕ್ ರಿಪಬ್ಲಿಕ್‌ನ ಗೌರವ ಕಾನ್ಸುಲ್ ಆಗಿಯೂ ಸೇವೆ ಸಲ್ಲಿಸಿದ್ದರು. ರಿಯಲ್ ಎಸ್ಟೇಟ್‌ನ ಜೊತೆಗೆ ಫಿಲ್ಮ್ ಪ್ರೊಡಕ್ಷನ್, ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಸ್ಪಾನ್ಸರ್‌ಶಿಪ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು.
ಪೊಲೀಸ್ ತನಿಖೆ
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಪೋಸ್ಟ್‌ಮಾರ್ಟಂ ವರದಿ ಮತ್ತು ಇತರ ತಾಂತ್ರಿಕ ಪರಿಶೀಲನೆಗಳ ನಂತರ ಸ್ಪಷ್ಟ ಕಾರಣ ತಿಳಿಯಲಿದೆ. ಐಟಿ ದಾಳಿ ಸಂಬಂಧಿತ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.





