ಕಲಬುರ್ಗಿ: ನಾನು ಸಿಎಂ ಆಗೋಕೆ ಹೋರಾಟ ಮಾಡುತ್ತಿಲ್ಲ. ನಿಮಗ್ಯಾಕೆ ಭಯ ಎಂದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ತಾರಕಕ್ಕೇರಿದ್ದು, ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಪ್ರತ್ಯೇಕ ಚಾಲನೆ ನೀಡಿರುವ ಯತ್ನಾಳ್ ಈಗ ಬಿಜೆಪಿ ನಾಯಕರ ವಿರುದ್ಧವೇ ವಾಗ್ದಾಳಿ ಮುಂದುವರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಶಾಸಕ ಯತ್ನಾಳ್ ಅವರು, ಇಲ್ಲಿ ಯಾರೂ ಕೂಡ ಸಿಎಂ ಆಗಲು ಹೋರಾಟ ಮಾಡುತ್ತಿಲ್ಲ. ನಾವು ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಆದ್ರೆ ಈ ಬಗ್ಗೆ ನಿಮಗ್ಯಾಕೆ ಭಯ ಹಾಗೂ ಟೆನ್ಶನ್ ಎಂದು ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರರನ್ನು ಪ್ರಶ್ನೆ ಮಾಡಿದ್ದಾರೆ.
ಯಾರೂ ಕೂಡ ವಕ್ಫ್ ವಿರುದ್ಧ ಸ್ವಾರ್ಥಕ್ಕಾಗಿ ಹೋರಾಟ ನಡೆಸುತ್ತಿಲ್ಲ. ಯಾವುದೇ ಕುಟುಂಬವನ್ನು ಮುಗಿಸಲು ಕೂಡ ನಾವು ಹೋರಾಟ ಮಾಡುತ್ತಿಲ್ಲ ಎಂದು ವಿಜಯೇಂದ್ರ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಇನ್ನು ಮುಂದುವರಿದು ಮಾತನಾಡಿದ ಶಾಸಕ ಯತ್ನಾಳ್ ಅವರು, ನನ್ನ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದೀರಿ. ಯಾಕೆ ಕ್ರಮ ಕೈಗೊಳ್ತೀರಾ? ಹೋರಾಟ ಮಾಡುವುದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನೆ ಮಾಡಿದರು.
ಇನ್ನು ವಕ್ಫ್ ವಿರುದ್ಧ ನಡೆಸುತ್ತಿರುವ ಹೋರಾಟದ ಬಗ್ಗೆ ಮಾಹಿತಿ ನೀಡಿದ ಯತ್ನಾಳ್, ನಾವು ಕಲಬುರ್ಗಿ ಬಳಿಕ ಬೆಳಗಾವಿಯಲ್ಲಿ ಬೃಹತ್ ಹೋರಾಟ ಮುಗಿಸಿ ದೆಹಲಿಗೆ ಹೋಗುತ್ತೇವೆ. ಡಿಸೆಂಬರ್.3-4ರಂದು ದೆಹಲಿಗೆ ಹೋಗಿ ವಕ್ಫ್ ವಿರುದ್ಧ ವರದಿ ನೀಡುತ್ತೇವೆ ಎಂದು ಹೇಳಿದರು.