ಪರಂವಃ ಸ್ಟುಡಿಯೊ ನಿರ್ಮಿಸಿರುವ ‘ಸಪ್ತಸಾಗರದಾಚೆ ಎಲ್ಲೋ – ಬದಿ ಬಿ ಇವತ್ತು ತೆರೆಗೆ ಬರುತ್ತಿದೆ. ಚಿತ್ರ ನಿರ್ಮಾಣ ಹಂತದಲ್ಲೇ ಇದನ್ನು ಎರಡು ಭಾಗಗಳಲ್ಲಿ ತೆರೆಗೆ ತರಲು ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರು ನಿರ್ಧರಿಸಿದ್ದರು. ಇಡೀ ಯೋಜನೆ ಎಷ್ಟು ಪಕ್ಕಾ ಆಗಿತ್ತು ಎಂದರೆ, ಮೊದಲನೇ ಬದಿಯ ಬಿಡುಗಡೆ ಆದ ಐವತ್ತನೇ ದಿನ ಎರಡನೇ ಬದಿಯ ಬಿಡುಗಡೆ ಎಂದು ನಿರ್ಮಾಣ ಸಂಸ್ಥೆ ಪ್ರಕಟಿಸಿತ್ತು.
ಮೊದಲನೇ ಭಾಗವನ್ನು ಪ್ರೇಕ್ಷಕರು ಸ್ವೀಕರಿಸಿದ ರೀತಿ, ಅದಕ್ಕೆ ಉದ್ಯಮದಿಂದ ಬಂದ ಪ್ರತಿಕ್ರಿಯೆ ಮೊದಲಾದ ಕಾರಣದಿಂದ ಎರಡನೇ ಬದಿ ನಿಗದಿತ ದಿನ ತೆರೆಗೆ ಬರಲಿಲ್ಲ. ಮಲಯಾಳ, ತಮಿಳು, ತೆಲುಗು ಚಿತ್ರರಂಗಗಳಿಂದ ಬಂದ ಪ್ರತಿಕ್ರಿಯೆ, ಅಲ್ಲಿ ಬಿಡುಗಡೆಗೆ ಕೋರಿಕೆಯ ಕಾರಣದಿಂದ ಚಿತ್ರದ ಬಿಡುಗಡೆ ತಡವಾಯಿತು ಎನ್ನುತ್ತಾರೆ ನಿರ್ಮಾಪಕ ಮತ್ತು ಅದರ ಮುಖ್ಯಪಾತ್ರಧಾರಿ ರಕ್ಷಿತ್ ಶೆಟ್ಟಿ. ಆಯಾ ಭಾಷೆಗಳಿಗೆ ಡಬ್ ಮಾಡಿ ಏಕಕಾಲದಲ್ಲಿ ಬಿಡುಗಡೆ ಮಾಡುವ ನಿರ್ಧಾರದಿಂದ ಈ ವಿಳಂಬ.
‘ಸಪ್ತಸಾಗರದಾಚೆ’ ಎರಡು ಭಾಗಗಳಾಗಿ ಬಂದ ಒಂದು ಪ್ರೇಮಕಥೆ. ನಿರ್ದೇಶಕ ಹೇಮಂತ ಎಂ.ರಾವ್ ಈ ಚಿತ್ರಕ್ಕೂ ಮೊದಲು ‘ಗೋಽ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’ ಚಿತ್ರಗಳನ್ನು ನಿರ್ದೇಶಿಸಿದವರು; ಸ್ವತಂತ್ರ ನಿರ್ದೇಶನಕ್ಕೆ ಮೊದಲು ಗಿರೀಶ್ ಕಾಸರವಳ್ಳಿಯವರ ‘ಗುಲಾಬಿ ಟಾಕೀಸ್’, ಜೇಕಬ್ ವರ್ಗೀಸ್‌ರ ‘ಸವಾರಿ’ ಮತ್ತು ‘ಪೃಥ್ವಿ’ ಚಿತ್ರಗಳ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದವರು.
ಕನ್ನಡ ಚಿತ್ರಗಳಲ್ಲಿ ಮುಂದಿನ ಭಾಗ ಇಲ್ಲವೇ ಉತ್ತರಾರ್ಧ ಅಥವಾ ಮುಂದಿನ ಪ್ರಕರಣಗಳನ್ನು ಹೇಳುವ ಮೂಲಕ ಮುಂದಿನ ಚಿತ್ರಕ್ಕೆ ದಾರಿ ಮಾಡಿಕೊಡುವುದು ಇದೇ ಮೊದಲೇನಲ್ಲ. ಪ್ರೇಮಕಥೆಯೊಂದರ ಮುಂದುವರಿದ ಭಾಗವಾಗಿ ಇಂದು ತೆರೆಗೆ ಬರುತ್ತಿರುವ ‘ಸಪ್ತಸಾಗರದಾಚೆ -ಬದಿ ಬಿ’ ಎನ್ನುವ ಹೆಸರೇ, ಚಿತ್ರದ ಕಥೆಯಲ್ಲಿ ನಾಯಕಿ ತನ್ನ ಪ್ರಿಯಕರನಿಗೆ ಸಂದೇಶ ಕಳುಹಿಸುವ ಕ್ಯಾಸೆಟ್‌ನ ಬದಿಗಳನ್ನೂ ಸೂಚಿಸುತ್ತದೆ.
ಈ ಚಿತ್ರ ಬಹುಶಃ ಪೂರ್ವಾರ್ಧ ಮತ್ತು ಉತ್ತರಾರ್ಧಗಳಿಗೆ ಸೀಮಿತವಾಗಬಹುದು. ಆದರೆ ಹಿಂಸೆ, ಲೈಂಗಿಕತೆ, ಪತ್ತೇದಾರಿಯಂತಹ ಕಥೆಗಳು ಎರಡಕ್ಕೇ ಸೀಮಿತವಾಗಬೇಕು ಎಂದೇನಿಲ್ಲ. ಆ ವಿವರಗಳಿಗೆ ಹೋಗುವ ಮೊದಲು, ಕನ್ನಡ ಚಿತ್ರರಂಗದಲ್ಲಿ ಇದೀಗ ಬಹಳ ಸುದ್ದಿಯಲ್ಲಿರುವ, ಚಿತ್ರರಸಿಕರು ಕುತೂಹಲದಿಂದ ಕಾಯುತ್ತಿರುವ ಮೂರು ಚಿತ್ರಗಳನ್ನು ಗಮನಿಸೋಣ.
ಅವು ‘ಕೆಜಿಎಫ್ ಅಧ್ಯಾಯ ೩’, ‘ಕಾಂತಾರ -ಪೂರ್ವ’ ಮತ್ತು ‘ರಿಚರ್ಡ್ ಆಂಟನಿ’. ಮೂರೂ ಚಿತ್ರಗಳನ್ನು ಹೊಂಬಾಳೆ ಸಂಸ್ಥೆ ನಿರ್ಮಿಸುತ್ತದೆ ಎನ್ನುವುದು ಗಮನಾರ್ಹ. ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರೋದ್ಯಮದಲ್ಲಿ ಗಳಿಕೆಯಲ್ಲಿ ಇತಿಹಾಸ ಬರೆದ ಚಿತ್ರ ‘ಕೆಜಿಎಫ್ ಅಧ್ಯಾಯ ೨’. ಪ್ರಶಾಂತ್ ನೀಲ್ ನಿರ್ದೇಶನ ಮತ್ತು ಯಶ್ ಮುಖ್ಯಭೂಮಿಕೆಯ ಈ ಚಿತ್ರದ ಗಳಿಕೆ ಸಹಸ್ರ ಕೋಟಿ ರೂ.ಗಳನ್ನು ದಾಟಿದ್ದು ಎಲ್ಲರಿಗೂ ತಿಳಿದ ವಿಷಯ. ಸಹಜವಾಗಿಯೇ ಚಿತ್ರದ ಮೂರನೇ ಭಾಗದ ನಿರೀಕ್ಷೆ, ಕುತೂಹಲ. ಸಾಮಾಜಿಕ ತಾಣಗಳು ಈ ಕುತೂಹಲ, ನಿರೀಕ್ಷೆಗಳಿಗೆ ಇಂಬುಕೊಟ್ಟಿವೆ. ಅದಕ್ಕೆ ಪೂರಕವೋ ಎಂಬಂತೆ ಯಶ್ ಅಭಿನಯದ ನಂತರದ ಚಿತ್ರದ ಕುರಿತ ಯಾವುದೇ ಅಽಕೃತ ಮಾಹಿತಿಗಳು ಹೊರಬಂದಿಲ್ಲ. ಹಿಂದಿ ಚಿತ್ರ ‘ರಾಮಾಯಣ’ದಲ್ಲಿ ರಾವಣನ ಪಾತ್ರ ನಿರ್ವಹಿಸಲು ಯಶ್ ಅವರಿಗೆ ಆಹ್ವಾನ ಬಂದಿದೆ; ಅದನ್ನವರು ಒಪ್ಪಿದ್ದಾರೆ ಎನ್ನುವ ಮಾತುಗಳಿದ್ದರೂ ಸಂಬಂಧಪಟ್ಟವರು ಇದನ್ನು ಖಚಿತಪಡಿಸಿಲ್ಲ. ನಿರ್ದೇಶಕಿಯೊಬ್ಬರ ಚಿತ್ರದಲ್ಲಿ ಯಶ್ ಅಭಿನಯಿಸಲಿದ್ದಾರೆ, ದೀಪಾವಳಿಯ ವೇಳೆ ಇದರ ಅಽಕೃತ ಪ್ರಕಟಣೆ ಆಗಲಿದೆ ಎನ್ನುವ ಮಾತಿತ್ತು. ಈ ತನಕ ಅದರ ಸುದ್ದಿಯೂ ಇಲ್ಲ. ಹೊಂಬಾಳೆ ಸಂಸ್ಥೆಯ ಮೂಲಗಳ ಪ್ರಕಾರ, ‘ಕೆಜಿಎಫ್ ಅಧ್ಯಾಯ ೩’, ೨೦೨೪ರಲ್ಲಿ ಆರಂಭವಾಗಿ ೨೦೨೫ರಲ್ಲಿ ತೆರೆಗೆ ಬರಲಿದೆ.
‘ಕಾಂತಾರ’ ಹೊಂಬಾಳೆ ಸಂಸ್ಥೆಗೆ ಸಿಕ್ಕಿದ ಜಾಕ್‌ಪಾಟ್. ಅತಿ ಕಡಿಮೆ ಬಂಡವಾಳ ಹೂಡಿ ಅತಿ ಹೆಚ್ಚು ಲಾಭವನ್ನು ಕಂಡ ಚಿತ್ರ ಎನ್ನುವ ಹೆಗ್ಗಳಿಕೆ ‘ಕಾಂತಾರ’ ಚಿತ್ರದ್ದು. ಈಗ ಎಲ್ಲರ ಕುತೂಹಲ, ಅದರ ಮುಂದಿನ ಭಾಗದ್ದು. ತಾವು ನಿರ್ದೇಶಿಸಿ ನಟಿಸಿ, ಯಶಸ್ವಿಯಾದ ಚಿತ್ರ ‘ಕಾಂತಾರ’ ಎರಡನೆಯ ಭಾಗ. ಅದರ ಪೂರ್ವಾರ್ಧ ಸಿದ್ಧವಾಗಬೇಕಾಗಿದೆ. ಇಷ್ಟರಲ್ಲೇ ಆ ಚಿತ್ರವೂ ಸೆಟ್ಟೇರಲಿದೆ. ಅದಕ್ಕೆ ಬೇಕಾದ ಬಹುತೇಕ ಪೂರ್ವಸಿದ್ಧತೆಗಳು ಮುಗಿದಿವೆ ಎನ್ನುತ್ತಾರೆ ನಿರ್ದೇಶಕ ನಟ ರಿಶಭ್ ಶೆಟ್ಟಿ. ಈ ಚಿತ್ರದ ಕಥೆಯ ಕುರಿತಂತೆ, ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಊಹಾಪೋಹಗಳು ಸಾಕಷ್ಟು ಹರಿದಾಡುತ್ತಿವೆ.
‘ಕಾಂತಾರ’ ಚಿತ್ರ ಮೊದಲು ತೆರೆಕಂಡದ್ದು ಕನ್ನಡದಲ್ಲಿ ಮಾತ್ರ. ‘ಕೆಜಿಎಫ್ ಚಾಪ್ಟರ್ ೨’ ಹಾಗಲ್ಲ. ಕನ್ನಡದಿಂದ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳ ಭಾಷೆಗಳಲ್ಲಿ ಡಬ್ ಆಗಿ ಏಕಕಾಲದಲ್ಲಿ ದೇಶ ವಿದೇಶಗಳಲ್ಲಿ ಪ್ರದರ್ಶನ ಕಂಡಿತ್ತು. ಕನ್ನಡದಲ್ಲಿ ಮಾತ್ರ ತೆರೆಕಂಡಿದೆ ಎಂದ ಮಾತ್ರಕ್ಕೆ ಅದು ಕರ್ನಾಟಕದಲ್ಲಿ ಮಾತ್ರ ತೆರೆಕಂಡದ್ದಲ್ಲ. ವಿಶ್ವಾದ್ಯಂತ ಕನ್ನಡದಲ್ಲೇ ತೆರೆಕಂಡಿತು. ಇಂಗ್ಲಿಷ್ ಉಪಶೀರ್ಷಿಕೆಯೊಂದಿಗೆ. ‘ಕಾಂತಾರ’ ಚಿತ್ರಕ್ಕೆ ಅದು ತೆರೆಕಂಡು ವಾರವಾಗುತ್ತಲೇ ಬೇರೆಬೇರೆ ಭಾಷೆಗಳ ಉದ್ಯಮಿಗಳಿಂದ ಬೇಡಿಕೆ ಬಂತು. ಮೂರನೇ ವಾರದ ವೇಳೆ ಅದರ ಆಯಾ ಭಾಷೆಗಳಿಗೆ ಡಬ್ ಆದ ಆವೃತ್ತಿ ಆಯಾ ರಾಜ್ಯಗಳಲ್ಲಿ ತೆರೆಕಂಡವು. ಗಳಿಕೆಯಲ್ಲಿ ದಾಖಲೆ ಬರೆಯಿತು.
ಈ ಎರಡೂ ಚಿತ್ರಗಳ ಗಳಿಕೆ, ಅದ್ಭುತ ಯಶಸ್ಸು ಕನ್ನಡ ಚಿತ್ರರಂಗದತ್ತ ಭಾರತೀಯ ಚಿತ್ರರಂಗವೇ ಹೊರಳಿ ನೋಡುವಂತೆ ಮಾಡಿದ್ದು ಸುಳ್ಳಲ್ಲ. ದಕ್ಷಿಣ ಭಾರತೀಯ ಭಾಷೆಗಳ ಡಬ್ ಆದ ಚಿತ್ರಗಳ ಗಳಿಕೆ ಮೂಲ ಹಿಂದಿ ಚಿತ್ರಗಳ ಗಳಿಕೆಯನ್ನು ಮೀರಿದಾಗ, ಅದು ಅಲ್ಲಿನ ಉದ್ಯಮದ ಪ್ರಮುಖರ ನಿದ್ದೆಗೆಡಿಸಿದ್ದೂ ಇದೆ. ಈ ನಡುವೆ ಚಿತ್ರದ ಯಶಸ್ಸಿಗೆ ನಾಯಕ ನಟನ ಜನಪ್ರಿಯತೆ ಮಾತ್ರ ಸಾಲದು, ಅದರ ನಿರ್ಮಾಣ ಶ್ರೀಮಂತಿಕೆಯೂ ಕಾರಣವಾಗುತ್ತದೆ. ಅದ್ಧೂರಿಯಾಗಿ ತಯಾರಾಗದ ಚಿತ್ರ ಈ ತೆರನ ಗೆಲುವು ದಾಖಲಿಸುವುದು ಕಷ್ಟಸಾಧ್ಯ ಎನ್ನುವ ಮಾತಲ್ಲಿ ಹುರುಳಿಲ್ಲದೆ ಇಲ್ಲ.
ಹೊಂಬಾಳೆ ಕೈಗೆತ್ತಿಕೊಂಡಿರುವ ಇನ್ನೊಂದು ಚಿತ್ರ ‘ರಿಚರ್ಡ್ ಆಂಟನಿ’. ಇದು ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಉಳಿದವರು ಕಂಡಂತೆ’ ಚಿತ್ರದ ಮುಂದಿನ ಭಾಗ. ಆ ಚಿತ್ರದ ಕಥಾನಾಯಕನ ಹೆಸರದು. ಇದರ ಮೊದಲ ನೋಟ ಈಗಾಗಲೇ ಬಂದಿದೆ. ಈ ಚಿತ್ರದ ಚಿತ್ರಕಥೆ ರಚನೆಗಾಗಿ ರಕ್ಷಿತ್ ಶೆಟ್ಟಿ ಅಮೆರಿಕಕ್ಕೆ ತೆರಳಿದ್ದರು.
ರಕ್ಷಿತ್ ಶೆಟ್ಟಿ, ರಿಶಭ್ ಶೆಟ್ಟಿ ಜೋಡಿಯ ‘ಕಿರಿಕ್ ಪಾರ್ಟಿ’ ಚಿತ್ರದ ಮುಂದಿನ ಭಾಗ ಬರಲಿದೆ ಎನ್ನುವ ಮಾತೂ ಕೇಳಿ ಬಂದಿದೆ. ಪತ್ತೇದಾರಿಕೆಯ ಪಾತ್ರಗಳ ಚಿತ್ರಗಳ ಮುಂದಿನ ಭಾಗಗಳ ನಿರ್ಮಾಣ ಸುಲಭ ಸಾಧ್ಯವಾಗಬಹುದೇನೋ. ರಮೇಶ್ ಅಭಿನಯದ ‘ಶಿವಾಜಿ ಸುರತ್ಕಲ್’ನಂತಹ ಚಿತ್ರಗಳಲ್ಲಿ ಬೇರೆ ಬೇರೆ ಕೇಸ್‌ಗಳ ಪತ್ತೆಗಾಗಿ ನಿರ್ಮಾಪಕರ ಶಕ್ತಿ ಮತ್ತು ಆಸಕ್ತಿಗೆ ಅನುಗುಣವಾಗಿ ಎಷ್ಟು ಬೇಕಾದರೂ ಆವೃತ್ತಿಗಳನ್ನು ನಿರ್ಮಿಸಬಹುದು.
ಭೂಗತ ಜಗತ್ತಿನ ಕಥೆಗಳು, ಹಿಂಸಾ ವಿಜೃಂಭಣೆಯ ಕಥೆಗಳಿಗೂ ಅದೇ ಸಾಧ್ಯತೆ. ‘ಡೆಡ್ಲಿ ಸೋಮ’, ‘ಡೆಡ್ಲಿ ೨’ ಚಿತ್ರಗಳನ್ನು ರವಿ ಶ್ರೀವತ್ಸ ನಿರ್ದೇಶಿಸಿದ್ದಾರೆ. ಇದು ಭೂಗತ ಜಗತ್ತಿನಲ್ಲಿದ್ದ ಸೋಮನ ಕಥೆ. ಹಿಂಸಾ ವಿಜೃಂಭಣೆಯ ಚಿತ್ರಗಳ ಸರಣಿಗೆ ಒಳ್ಳೆಯ ಉದಾಹರಣೆ ‘ದಂಡುಪಾಳ್ಯ’. ಅದರ ಮೂರು ನಾಲ್ಕು ಭಾಗಗಳು ಸಿದ್ಧವಾಗಿವೆ.
ಕೆಲವು ಪ್ರೇಮಕಥೆಗಳುಳ್ಳ ಚಿತ್ರಗಳ ಉತ್ತರಾರ್ಧಗಳು ಬಂದಿವೆ. ಯೋಗರಾಜ್ ಭಟ್ ನಿರ್ದೇಶನ, ಗಣೇಶ್ ಅಭಿನಯದ ‘ಮುಂಗಾರು ಮಳೆ’ ಚಿತ್ರದ ಎರಡನೇ ಭಾಗವನ್ನು ನಿರ್ದೇಶಿಸಿದ್ದು ಶಶಾಂಕ್. ನಿರೀಕ್ಷಿಸಿದ ಗೆಲುವನ್ನು ಅದು ದಾಖಲಿಸಲಿಲ್ಲ. ‘ಗಾಳಿಪಟ’ ಚಿತ್ರದ ಮೊದಲನೇ ಮತ್ತು ಎರಡನೇ ಭಾಗವನ್ನು ನಿರ್ದೇಶಿಸಿದ್ದು ಯೋಗರಾಜ್ ಭಟ್ ಅವರೇ.
ಕನ್ನಡದಲ್ಲಿ ಈಗ ಹಲವು ಯಶಸ್ವಿ ಚಿತ್ರಗಳ ಮುಂದಿನ ಭಾಗಗಳು ಬರಲಿವೆ ಎಂದು ಸಂಬಂಧಪಟ್ಟವರು ಹೇಳಿಕೊಂಡಿದ್ದಾರೆ. ಅದರ ಪಟ್ಟಿಯೂ ದೊಡ್ಡದಿದೆ. ಉದ್ಯಮವಾಗಿ ಚಿತ್ರರಂಗವನ್ನು ನೋಡುವ ಸಾಕಷ್ಟು ಮಂದಿ ಇಲ್ಲಿ ಸುಲಭ ಲಾಭದ ನಿರೀಕ್ಷೆಯಲ್ಲಿ ಇರುತ್ತಾರೆ. ‘ಮುಂಗಾರು ಮಳೆ’ ಚಿತ್ರದ ಯಶಸ್ಸಿನ ಬೆನ್ನಿಗೆ ನಿರ್ಮಾಪಕರಾಗಿ ಸಾಕಷ್ಟು ಮಂದಿ ನಿವೇಶನೋದ್ಯಮಿಗಳು ಇಲ್ಲಿ ಬಂದು ತಮ್ಮ ಅದೃಷ್ಟ ಪರೀಕ್ಷೆ ಮಾಡಿದರು. ಸಫಲರಾದವರು ಉಳಿದರು. ವಿಫಲರಾದವರು ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಮರಳಿದರು ಎನ್ನುತ್ತಾರೆ ಹಿರಿಯ ಚಿತ್ರೋದ್ಯಮಿಗಳು.
ನಿರ್ಮಾಪಕರಿಗಿರಲಿ, ನಟರಿಗಿರಲಿ, ಒಂದು ಚಿತ್ರ ಗೆದ್ದರೆ ಸಾಕು, ಅವರ ವೃತ್ತಿಜೀವನಕ್ಕೆ ಭದ್ರಬುನಾದಿ ಹಾಕುತ್ತದೆ ಎನ್ನುವ ಲೆಕ್ಕಾಚಾರ ಈಗ. ನಟನೊಬ್ಬನ ಚಿತ್ರ ಗೆದ್ದರೆ, ಅದು ಆತನ ಮುಂದಿನ ಚಿತ್ರಗಳ ಸಂಭಾವನೆ ಏರಿಸಲು ಸಹಕಾರಿ. ಹಾಗಂತ ಸಾಕಷ್ಟು ಪೂರ್ವಸಿದ್ಧತೆ ಇಲ್ಲದ, ಕೇವಲ ಬಂಡವಾಳ ಹೂಡಿಕೆ, ಶ್ರೀಮಂತಿಕೆ ಮಾತ್ರ ಚಿತ್ರವನ್ನು ಗೆಲ್ಲಿಸಲಾರದು. ಒಳ್ಳೆಯ ಕಥಾವಸ್ತು, ಅದನ್ನು ನಿರೂಪಿಸಬಲ್ಲ ಸಮರ್ಥ ನಿರ್ದೇಶಕ ಮತ್ತು ತಂತ್ರಜ್ಞರ ತಂಡ, ಪೂರ್ವಸಿದ್ಧತೆಗಳು ಗೆಲುವಿಗೆ ಪೂರಕ.