ಮೈಸೂರು: ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ನವೆಂಬರ್ 19 ರಿಂದ ಡಿಸೆಂಬರ್ 10 ರವರೆಗೆ ನಮ್ಮ ಶೌಚಾಲಯ ನಮ್ಮ ಗೌರವ ಎಂಬ ವಿಶೇಷ ಆಂದೋದಲನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಧಿಕಾರಿಗಳಾದ ಕೆ.ಎಂ ಗಾಯಿತ್ರಿ ತಿಳಿಸಿದ್ದಾರೆ.
ವಿಶ್ವ ಶೌಚಾಲಯ ದಿನಾಚರಣೆ ಕುರಿತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ಜರುಗಿಸಿ ಮಾತನಾಡಿದರು, ಗ್ರಾಮೀಣ ಸಮುದಾಯದಲ್ಲಿ ನೈರ್ಮಲ್ಯ, ಸುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರಂತರ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯು ಬಯಲು ಬಹಿರ್ದಸೆ ಮುಕ್ತ ಸ್ಥಿತಿಯ ಸ್ಥಾನಮಾನ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಶ್ವ ಶೌಚಾಲಯ ಮತ್ತು ವಿಶ್ವಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಪ್ರಸ್ತುತ ವರ್ಷ “ನಮ್ಮ ಶೌಚಾಲಯ ನಮ್ಮ ಗೌರವ” ಎಂಬ ಶೀರ್ಷಿಕೆ ಹಾಗೂ ಅಂದದ ಶೌಚಾಲಯ ಆನಂದದ ಜೀವನ” ಎಂಬ ಘೋಷ ವಾಕ್ಯದೊಂದಿಗೆ ವಿಶೇಷ ಆಂದೋಲನ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 445062 ಕುಟುಂಬಗಳಿದ್ದು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಒಟ್ಟು 428713 ಹಾಗೂ ನಗೇಗಾ ಯೋಜನೆಯಡಿ ಮತ್ತು ಸ್ವಂತ ನಿರ್ಮಾಣದಲ್ಲಿ 5362 ಶೌಚಾಲಯಗಳು ನಿರ್ಮಾಣವಾಗಿರುತ್ತದೆ. ಇನ್ನು ಬಾಕಿ ಉಳಿದಿರುವ 19773 ಶೌಚಾಲಯಗಳಿಗೆ ಈಗಾಗಲೇ 16523 ಫಲಾಭವಿಗಳು ಶೌಚಾಲಯ ನಿರ್ಮಿಸಿಕೊಳ್ಳಲು ಸಿಟಿಜನ್ ಆಪ್ ಮೂಲಕ ಅರ್ಜಿ ಸಲ್ಲಿಸಿರುತ್ತಾರೆ. ಈ ಅಭಿಯಾನದಲ್ಲಿ ವಿಶೇಷವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶೌಚಾಲಯ ರಹಿತ ಅರ್ಹ ಫಲಾನುಭವಿಗಳನ್ನು ಗುರುತಿಸಿ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಹಾಗೂ ಈಗಾಗಲೇ ಇರುವ ಶೌಚಾಲಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಶೌಚಾಲಯ ರಹಿತ ಅರ್ಹ ಫಲಾನುಭವಿಗಳು ಶೌಚಾಲಯಗಳನ್ನು ಪಡೆಯಲು https://sbm.gov.in ಈ ಲಿಂಕ್ ಬಳಸುವ ಮೂಲಕ ಸಾರ್ವಜನಿಕರೇ Citizen App ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಎಂಬ ಮಾಹಿತಿಯನ್ನು ಆಂದೋಲನದ ಮೂಲಕ ವ್ಯಾಪಕವಾಗಿ ಪ್ರಚಾರ ಪಡಿಸಲು ತಿಳಿಸಿದರು.
ಸರ್ಕಾರದ ನಿರ್ದೇಶನದಂತೆ ವಿಶೇಷ ಆಂದೋಲನ ಅಂಗವಾಗಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿರುವ ಸಮುದಾಯ ಶೌಚಾಲಯ ಅಂಗನವಾಡಿ, ಶಾಲಾ-ಕಾಲೇಜು ಶೌಚಾಲಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಶೌಚಾಲಯಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ನವೆಂಬರ್ 19 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಜಿ. ಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಡಾ. ಎಂ. ಕೃಷ್ಣರಾಜು ರವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿ.ಪ ಮುಖ್ಯ ಯೋಜನಾಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಹಾಗೂ WASH ಸಮಾಲೋಚಕರು ಉಪಸ್ಥಿತರಿದ್ದರು.