ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿಗೆ ನಟ ದರ್ಶನ್, ಅವರ ಆಪ್ತೆ ಪವಿತ್ರಾಗೌಡ ಮತ್ತು ಸಹಚರರು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದು ಅದರ ಫೋಟೊಗಳು ದತ್ತಾಂಶ ಮರು ಸಂಗ್ರಹದ ವೇಳೆ ಲಭ್ಯವಾಗಿವೆ. ಆರೋಪಿಗಳ ಕ್ರೌರ್ಯ ಅನಾವರಣವಾಗಿದೆ.
ದೋಷಾರೋಪ ಪಟ್ಟಿ ಸಲ್ಲಿಕೆ ಬೆನ್ನಲ್ಲೇ ರೇಣುಕಸ್ವಾಮಿ ಕೈಮುಗಿದು ಬೇಡಿಕೊಳ್ಳುತ್ತಿರುವ ಹಾಗೂ ನಿತ್ರಾಣಗೊಂಡು ಅಂಗಾತ ಮಲಗಿರುವ ಫೋಟೊಗಳು ಲಭ್ಯವಾಗಿವೆ.
ಈ ಪ್ರಕರಣದಲ್ಲಿ ನಟ ದರ್ಶನ್ ಅಲಿಯಾಸ್ ಡಿ ಬಾಸ್ ಸೇರಿ ಅನೇಕರ ವಿರುದ್ಧ ಪ್ರಬಲ ಸಾಕ್ಷ್ಯಗಳು ಸಿಕ್ಕಿದಂತೆ ಆಗಿದೆ.
ಪಟ್ಟಣಗೆರೆ ಶೆಡ್ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೊ ಇದಾಗಿದೆ. ಮೈಮೇಲೆ ಗಾಯದ ಗುರುತುಗಳಿವೆ. ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಇನ್ನ ಮುಂದೆ ಪವಿತ್ರಾಗೆ ಸಂದೇಶ ಕಳುಹಿಸುವುದಿಲ್ಲ. ತಪ್ಪಾಯಿತು ಬಿಡಿ ಎಂದು ಪರಿಪರಿಯಾಗಿ ಕ್ಷಮೆ ಕೋರಿದ್ದರೂ ಆರೋಪಿಗಳ ಮನಸ್ಸು ಕರಗಿರಲಿಲ್ಲ. ಮನಸೋಇಚ್ಛೆ ಹಲ್ಲೆ ನಡೆಸಿದ್ದರು ಎಂದು ಗೊತ್ತಾಗಿದೆ. ಈ ಅಂಶಗಳನ್ನೂ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ವಿವರವಾಗಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕೃತ್ಯದ ವೇಳೆ ಪವಿತ್ರಾಗೌಡ ವ್ಯವಸ್ಥಾಪಕ ಕೆ. ಪವನ್ ಫೋಟೊ ತೆಗೆದು ಅದನ್ನು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ ವಿನಯ್ ಹಾಗೂ ದರ್ಶನ್ ಆಪ್ತ, ಸಾಫ್ಟ್‌ವೇರ್ ಎಂಜಿನಿಯರ್ ಪ್ರದೂಷ್ ಅವರ ಐಫೋನ್‌ಗೆ ಕಳುಹಿಸಿದ್ದರು. ರೇಣುಕಸ್ವಾಮಿ ಮೃತಪಟ್ಟ ನಂತರ ಫೋಟೊ ಡಿಲೀಟ್ ಮಾಡಿ ಸಾಕ್ಷ್ಯ ನಾಶ ಪಡಿಸಿದ್ದರು. ದತ್ತಾಂಶ ಮರು ಸಂಗ್ರಹದ ವೇಳೆ ಆ ಫೋಟೊ ಲಭ್ಯವಾಗಿವೆ.
ಈ ಪ್ರಕರಣದಲ್ಲಿ ದರ್ಶನ್ ವಿರುದ್ಧ 3991 ಪುಟಗಳ ಚಾರ್ಜ್ ಶೀಟ್ ಹಾಗೂ 231 ಸಾಕ್ಷ್ಯಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.