Mysore
20
overcast clouds
Light
Dark

ರಾಜ್ಯದಲ್ಲಿ ಪೆಟ್ರೋಲ್ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಸಚಿವ ಜಮೀರ್ ಅಹ್ಮದ್‌

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚು ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿಸಿದ್ದೇ ಬಿಜೆಪಿ ಸರ್ಕಾರ ಎಂದು ಸಚಿವ ಜಮೀರ್ ಅಹಮದ್ ಖಾನ್ ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿಂದು (ಜೂನ್‌.17) ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪೆಟ್ರೋಲ್ ಪ್ರತಿ ಲೀಟರ್ ಗೆ 32.98 ರೂ., ಡೀಸೆಲ್ ಪ್ರತಿ ಲೀಟರ್ ಗೆ 31.83 ರೂ. ಅಬಕಾರಿ ಸುಂಕ ಸಂಗ್ರಹ ಮಾಡುತ್ತಿದೆ. ಇದರ ಬಗ್ಗೆ ಬಿಜೆಪಿ ನಾಯಕರು ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರೆಶ್ನೆ ಮಾಡಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಅಬಕಾರಿ ಸುಂಕ ಪೆಟ್ರೋಲ್ ಗೆ 9.48 ರೂ., ಡೀಸೆಲ್ ಗೆ 3.56 ರೂ. ವಿಧಿಸಲಾಗಿತ್ತು. ಹಾಗಾಗಿಯೇ ಆಗ ಪೆಟ್ರೋಲ್ 68.31 ರೂ., ಡಿಸೇಲ್ 48.63 ರೂ. ಗೆ ದೊರೆಯುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಪೆಟ್ರೋಲ್ 106 ರೂ ರೂ. ವರೆಗೆ ಹೋಗಿತ್ತು. ಯುಪಿ ಎ ಸರ್ಕಾರದ ಅವಧಿಯಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 97.68 ಡಾಲರ್ ಇತ್ತು. ಆಗ ಪೆಟ್ರೋಲ್ ಲೀಟರ್ 68.31 ರೂ. ಇತ್ತು. ಈಗ ಕಚ್ಚಾ ತೈಲ ಬೆಲೆ 77.64 ರೂ. ಡಾಲರ್ ಇದ್ದರೂ ಬಿಜೆಪಿ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಯಾಕೆ ಕಡಿಮೆ ಆಗಲಿಲ್ಲ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ದಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದಾಗ ಇವರ ಧ್ವನಿ ಎಲ್ಲಿ ಅಡಗಿತ್ತು. ಅಡುಗೆ ಅನಿಲ ಬೆಲೆ 419 ರೂ. ಇದ್ದದ್ದು 903 ರೂ.ಮಾಡಿದ್ದು ಬಿಜೆಪಿ ಸರ್ಕಾರ. ಇದರ ಬಗ್ಗೆ ಬಿಜೆಪಿ ನಾಯಕರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ತೆರಿಗೆ ಹೆಚ್ಚಳ ನಂತರ ಪೆಟ್ರೋಲ್ ಲೀಟರ್ ಗೆ 102 ರೂ., ಡೀಸೆಲ್ 88.41 ರೂ. ಆಗಿದೆ. ನೆರೆಯ ತಮಿಳು ನಾಡು, ಆಂಧ್ರ, ಮಹಾರಾಷ್ಟ್ರ ಕ್ಕೆ ಹೋಲಿಸಿದರೆ 5 ರಿಂದ 7 ರೂ. ವರೆಗೆ ಕಡಿಮೆ. ಕೇರಳದಲ್ಲಿ ಪೆಟ್ರೋಲ್ 106.66, ಡೀಸೆಲ್ 95.60,, ಆಂಧ್ರ ದಲ್ಲಿ ಪೆಟ್ರೋಲ್ 109.44, ಡಿಸೇಲ್ 97.28, ಮಹಾರಾಷ್ಟ್ರ ದಲ್ಲಿ ಪೆಟ್ರೋಲ್ 104.46, ಡೀಸೆಲ್ 90.45ರೂ. ಇದೆ. ಇದಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲೇ ಅತಿ ಕಡಿಮೆ. ಬಿಜೆಪಿ ಅವರು ಅಧಿಕಾರ ಇದ್ದಾಗ ಜನರ ಮೇಲೆ ಹೊರೆ ಹಾಕಿದವರು.ಹೀಗಾಗಿ ಅವರಿಗೆ ಹೋರಾಟ ಮಾಡುವ ನೈತಿಕತೆ ಇಲ್ಲ. ಗಿಮಿಕ್ ಹಾಗೂ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಚಿವ ಜಮೀರ್ ಖಾನ್ ವ್ಯಂಗ್ಯವಾಡಿದರು.