ರಾಮನಗರ: ಕುಮಾರಸ್ವಾಮಿ ಅವರೇ, ನೀವು ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ನನ್ನ ಕುಟುಂಬದ ಆಸ್ತಿಯ ಪಟ್ಟಿ ಕೊಟ್ಟಿರುವುದು ನನಗೆ ಗೊತ್ತಿದೆ. ನನ್ನ ಆಸ್ತಿ ಎಷ್ಟಿದೆ, ಸಿದ್ದರಾಮಯ್ಯ ಅವರ ಆಸ್ತಿ ಎಷ್ಟಿದೆ ಅಂತ ಪಟ್ಟಿ ಕೊಟ್ಟಿದ್ದೀರಿ ಬಹಳ ಸಂತೋಷ. ಇದಕ್ಕೆಲ್ಲಾ ನಾನು ಸಿದ್ಧನಾಗಿದ್ದೇನೆ, ಉತ್ತರ ಕೊಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಭಾನುವಾರ ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಒಂದು ಮಾತು ಕೇಳುತ್ತೇನೆ. ನಿಮ್ಮ ಕುಟುಂಬದವರು ಈ ಜಾಗಕ್ಕೆ ಬಂದಾಗ ಎಷ್ಟು ಆಸ್ತಿ ಇತ್ತು, ಇಲ್ಲಿ ಬಂದ ನಂತರ ಎಷ್ಟು ಜಮೀನು ಪಡೆದುಕೊಂಡಿರಿ? ಯಾರ ಜಮೀನನ್ನು ಪಡೆದುಕೊಂಡಿರಿ? ಈಗ ಎಷ್ಟು ಎಕರೆ ಆಸ್ತಿಯಾಗಿದೆ? ಆ ಆಸ್ತಿಗಳು ಯಾರ ಹೆಸರಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಮತ್ತೆ ಮರಳಿ ನಿಮ್ಮ ಹೆಸರಿಗೆ ಬಂದಿದ್ದು ಹೇಗೆ? ಇದಕ್ಕೆಲ್ಲಾ ನೀವು ಉತ್ತರ ನೀಡಬೇಕು. ನೀವು ಮಾಡಿರುವ ಅಕ್ರಮಗಳನ್ನು ಪಟ್ಟಿ ಮಾಡಿಸುತ್ತೇನೆ. ಅದರ ಬಗ್ಗೆಯೂ ತನಿಖೆ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಹಾಗೂ ಬಿಜೆಪಿಯವರ ಕುತಂತ್ರ ನಮಗೆ ತಿಳಿದಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಸುತ್ತಿರುವ ಈ ಜನಾಂದೋಲನದಲ್ಲಿ ಜನರು ನಮಗೆ ನೀಡುತ್ತಿರುವ ಬೆಂಬಲ ಅನನ್ಯ. ಜನರ ಪರವಾಗಿ ನಮ್ಮ ಈ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದರು.
ಭ್ರಷ್ಟಾಚಾರಿಗಳಿಂದ, ಭ್ರಷ್ಟಾಚಾರಕ್ಕೋಸ್ಕರ, ಭ್ರಷ್ಟಾಚಾರಿಗಳೇ ಈ ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ. ಬಿಜೆಪಿ, ಜೆಡಿಎಸ್’ನವರು ಪಾದಯಾತ್ರೆ ಮೂಲಕ ಜನರಿಗೆ ಸುಳ್ಳು ಹೇಳೋಕೆ ಹೊರಟಿದ್ದಾರೆ. ಅವರ ಅವಧಿಯಲ್ಲಿ ಹಲವು ಹಗರಣಗಳು ಆಗಿವೆ. ಈ ಬಗ್ಗೆ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಪಾದಯಾತ್ರೆ ಮಾಡುತ್ತಿರುವ ನಿಮಗೆ ಯಾವ ನೈತಿಕತೆ ಸ್ವಾಭಿಮಾನವು ಇಲ್ಲ ಎಂದು ಟೀಕಿಸಿದರು.





