ಬೆಂಗಳೂರು: ಮೈಸೂರು ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ಇರುವವರಿಗೆ ದಾಖಲಾತಿ ಖಾತೆ ನೀಡುತ್ತಿಲ್ಲ. ಬದಲಿಗೆ ಖಾತೆ ಮಾಡಿಕೊಡಲು ಲಂಚ ಪಡೆಯುವ ಕೆಲಸ ಸೇರಿದಂತೆ ಅಕ್ರಮಗಳು ನಡೆಯುತ್ತಿವೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್‌ನಲ್ಲಿ ಇಂದು(ಮಾರ್ಚ್.19) ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ ಅವರು, ನಮ್ಮ ಕ್ಷೇತ್ರದಲ್ಲಿ ಸಾಗುವಳಿ ಚೀಟಿ ಇರುವವರಿಗೆ ದಾಖಲಾತಿ ಖಾತೆ ಮಾಡಿಕೊಡುತ್ತಿಲ್ಲ. ಅರ್ಜಿದಾರರು ಅರ್ಜಿ ಹಾಕಿ, ಶುಲ್ಕ ಪಾವತಿಸಿದ ಮೇಲೆಯೂ ಖಾತೆ ನೀಡುತ್ತಿಲ್ಲ. ಬದಲಿಗೆ ಆ ಕಚೇರಿಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಕ್ರಮಗಳು ಕೇಳಿ ಬರುತ್ತಿವೆ ಎಂದರು.
ಸುಮಾರು 30-35 ವರ್ಷಗಳಿಂದ ಖಾತೆ ಆಗಿಲ್ಲ. ಸಾಗುವಳಿ ಚೀಟಿ ನೀಡಿದವರಿಗೆ ತಕ್ಷಣ ಖಾತೆ ಮಾಡಿಕೊಡಬೇಕು. ಆದರೆ ಇಲ್ಲಿ ಖಾತೆ ಮಾಡಿಸಲು ಲಂಚ ಕೇಳುವ ಅಧಿಕಾರಿಗಳಿಗೆ ಲಂಚ ನೀಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಖಾತೆ ಮಾಡಿಕೊಡುವುದಕ್ಕೆ ಒಂದು ಕಾಲ ಮಿತಿಯನ್ನು ಮಾಡಬೇಕು ಎಂದು ಹೇಳಿದರು.
ಈ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ಸಾಗುವಳಿ ಚೀಟಿ ನೀಡಿದವರಿಗೆ ಇನ್ನೂ ಖಾತೆ ನೀಡದಿರವುದು ಸತ್ಯ. ಕಳೆದ 20-30 ವರ್ಷಗಳಿಂದ ಸಾಗುವಳಿ ಚೀಟಿ ದ್ದರೂ ಖಾತೆ ಮಾಡಿಕೊಡಲು ಆಗಿಲ್ಲ. ನೈಜವಾಗಿ ಇರುವ ಕೇಸಲ್ಲಿ ಆದಷ್ಟು ಬೇಗ ಖಾತೆ ಮಾಡಿಕೊಡುತ್ತೇವೆ. ಅಧಿಕಾರಿಗಳಿಗೂ ಖಾತೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಇನ್ನು ಹಲವು ಪ್ರಕರಣಗಳಲ್ಲಿ ಅಕ್ರಮವಾಗಿ ಭೂಮಿ ಹಂಚಿಕೆಯಾಗಿದೆ. ಅರಣ್ಯ ಭಾಗದಲ್ಲಿ ಹಂಚಿಕೆ ಆಗಿರುವುದಕ್ಕೆ ದಾಖಲಾತಿ ಮಾಡಿಕೊಡಲು ಆಗುವುದಿಲ್ಲ. ಅದನ್ನು ಪರಿಶೀಲಿಸಿದ ನಂತರ ನೈಜವಾಗಿ ಹಂಚಿಕೆ ಆಗಿರುವವರಿಗೆ ಆದಷ್ಟು ಬೇಗ ಖಾತೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.





