ಬೆಂಗಳೂರು: ನನ್ನ ಮೇಲೆ ಹಾಗೂ ಹಿರಿಯರಾದ ಎಚ್.ಡಿ ದೇವೇಗೌಡರ ಮೇಲೆ ನಿನಗೆ ಗೌರವ ಇದ್ದರೆ 24 ಇಲ್ಲ, 48 ಗಂಟೆಗಳ ಒಳಗಾಗಿ ಬಂದು ಶರಣಾಗುವಂತೆ ನಿನಗೆ ಕೈ ಮುಗಿದು ಮನವಿ ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ.
ನಗರದ ಜೆಡಿಎಸ್ ಕಚೇರಿಯ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಷ್ಟು ದಿನ ಕಳ್ಳ ಪೊಲೀಸ್ ಆಟ, ಈ ನೆಲದ ಕಾನೂನಿದೆ, ಏಕೆ ಎದರಬೇಕು. ವಿದೇಶದಿಂದ ಬಂದು ತನಿಖೆಗೆ ಸಹಕರಿಸು ಎಂದು ಎಚ್‌ಡಿಕೆ ತಿಳಿ ಹೇಳಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಇದು ಎಲ್ಲರೂ ತಲೆ ತಗ್ಗಿಸುವ ಪ್ರಕರಣ, ಇದೊಂದು ಅಸಹ್ಯ ಪಡುವ ಪ್ರಕರಣವಾಗಿದೆ. ಹಾಗಾಗಿ ಸಾರ್ವಜನಿಕವಾಗಿ ನಾನು ಮತ್ತೊಮ್ಮೆ ಕ್ಷಮೆ ಕೋರುತ್ತೇನೆ. ಈ ಪ್ರಕರಣದಲ್ಲಿ ನನ್ನನ್ನು ಹಾಗೂ ದೇವೇಗೌಡರನ್ನು ತಾಳೆ ಹಾಕಿದ್ದಾರೆ. ಹಾಗಾಗಿ ನಾನು ದೇವೇಗೌಡರಲ್ಲಿ ಮನವಿ ಮಾಡುತ್ತೇನೆ. ಪ್ರಜ್ವಲ್ ಎಲ್ಲೇ ಇದ್ದರು ಬಂದು ಬಂಧಿತರಾಗುವಂತೆ ತಿಳಿಸಿ ಎಂದು ಮನವಿ ಮಾಡಿರುವುದಾಗಿ ಹೇಳಿದರು.
ಡಿಕೆ ಶಿವಕುಮಾರ ಹಾಗೂ ದೇವರಾಜೇಗೌಡ ಮಾತನಾಡಿರುವ ಆಡಿಯೋ ಸಂಬಂಧ, ಡಿಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಹೆಸರು ಹೇಳಿ ಎಂದಿದ್ದೀರಾ. ನೀವು ತಿಹಾರ್ ಜೈಲಿನಲ್ಲಿದ್ದಾಗ ನಾನು ನಿಮ್ಮನ್ನು ಭೇಟಿಯಾಗಿದ್ದೇನೆ. ಅದಾದ ನಾಲ್ಕು ದಿನಗಳ ಬಳಿಕ ನೀವು ಬಿಡುಗಡೆಗೊಂಡಿರಿ. ಈ ಬಗ್ಗೆ ಕಾಂಗ್ರೆಸ್ ನಾಯಕರು ಯಾಕೆ ಮಾತನಾಡುತ್ತಿಲ್ಲ. ನಾನಿಲ್ಲಿ ದೇವರಾಜೇಗೌಡರ ಬಗ್ಗೆ ವಕಾಲತ್ತು ವಹಿಸಲು ಬಂದಿಲ್ಲ. ಸತ್ಯಾಂಶ ತಿಳಿಸಲು ಬಂದಿದ್ದೇನೆ ಎಂದು ಕಿಡಿಕಾರಿದರು.




