ಬೆಳಗಾವಿ: ಬೆಳಗಾವಿ ಸುವರ್ಣಸೌಧದಲ್ಲಿ ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಇಲ್ಲಿ ಅಭಿವೃದ್ಧಿ ಕುರಿತಂತೆ ಚರ್ಚೆಯಾಗಲಿದೆಯೋ ಅಥವಾ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗುತ್ತದೆಯೋ ಎಂಬುದು ಮಹತ್ವ ಪಡೆದುಕೊಂಡಿದೆ.
ಭ್ರಷ್ಟಾಚಾರ ಆರೋಪದ ಸುಳಿಯಲ್ಲಿ ಸಿಲುಕಿದ್ದ ಆಡಳಿತರೂಢ ಕಾಂಗ್ರೆಸ್, ಉಪ ಚುನಾವಣೆ ಭರ್ಜರಿ ಗೆಲುವು ಹಾಗೂ ಜನ ಕಲ್ಯಾಣ ಯಶಸ್ಸಿನ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇತ್ತ ಕಾಂಗ್ರೆಸ್ ಪಡೆಯ ವಿರುದ್ಧ ಮುಗಿಬೀಳಲು ಪ್ರತಿಪಕ್ಷ ಬಿಜೆಪಿ ಉಮೇದಿನಲ್ಲಿದೆ. ಮಿತ್ರಪಕ್ಷವಾದ ಜೆಡಿಎಸ್, ಬಿಜೆಪಿ ಬೆನ್ನಿಗೆ ನಿಲ್ಲುತ್ತಿದೆ.
ಮುಡಾ ಹಗರಣ, ವಕ್ಫ್ ಆಸ್ತಿವಿವಾದ, ಬಿಪಿಎಲ್ ರೇಷನ್ ಕಾರ್ಡ್ ಗೊಂದಲ ಸೇರಿದಂತೆ ಹಲವು ಅಸ್ತ್ರಗಳನ್ನು ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಸಿದ್ಧಪಡಿಸಿಕೊಂಡಿದೆ. ಪ್ರಮುಖವಾಗಿ ಬಳ್ಳಾರಿಯ ಬಾಣಂತಿಯರ ಸರಣಿ ಸಾವು ಪ್ರಕರಣ ಉಭಯ ಸದನದಲ್ಲೂ ಪ್ರಸ್ತಾಪವಾಗಲಿದೆ. ಮತ್ತೊಂದೆಡೆ, ಪ್ರತಿಪಕ್ಷಗಳಲ್ಲಿನ ಅತೃಪ್ತಿಯ ಒಡಕಿನ ಲಾಭ ಪಡೆದು ತಿರುಗೇಟು ನೀಡಲು ಆಡಳಿತಾರೂಢ ಕಾಂಗ್ರೆಸ್ ಸಹ ಸಿದ್ಧವಾಗಿದೆ.
ಒಟ್ಟಾರೆ ಬೆಳಗಾವಿಯ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಂತೆ ಚರ್ಚೆಯಾಗುತ್ತದ್ದೆಯೋ, ಇಲ್ಲ ನಿರೀಕ್ಷೆಯಂತೆ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.