Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ವೀಣಾ ಕಾಶಪ್ಪನವರ್ ಗೆ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಪಾಠ : ‌ಜಯಮೃತ್ಯುಂಜಯ  ಸ್ವಾಮೀಜಿ

ಬೆಂಗಳೂರು :  ಮುಂಬರುವ ಲೋಕಸಭಾ ಚುನಾವಣೆಯಲ್ಲಿ
ಬಾಗಲಕೋಟೆ ಕ್ಷೇತ್ರದಿಂದ ವೀಣಾ ಕಾಶಪ್ಪನವರ್ ಗೆ ಟಿಕೆಟ್ ನೀಡದಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಪಂಚಮಸಾಲಿ. ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಬಾಗಲಕೋಟೆ ಕ್ಷೇತ್ರದಿಂದ ಸಂಯುಕ್ತ ಪಾಟೀಲ್ ಅವರಿಗೆ ಟಿಕೆಟ್ ನೀಡುವ ನಿರ್ಧಾರವನ್ನು ಕೆಪಿಸಿಸಿ ಪುನರ್ ಪರಿಶೀಲನೆ ಮಾಡಬೇಕು. ಒಂದು ವೇಳೆ ಇದೇ ಅಂತಿಮ ನಿರ್ಧಾರ ಎಂದರೆ, ನಾವು  ಕೂಡ ಚುನಾವಣೆಯಲ್ಲಿ ಒಮ್ಮತದ ನಿರ್ಣಯ ಮಾಡಬೇಕುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಬುಧವಾರ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ಪ್ರಮುಖರನ್ನು ಭೇಟಿಯಾಗಿ, ವೀಣಾ ಕಾಶಪ್ಪನವರ್ ಗೆ ಏಕೆ ಟಿಕೆಟ್ ನೀಡಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಸಂಯುಕ್ತ ಪಾಟೀಲ್ ಅವರಿಗೆ ಟಿಕೆಟ್ ನೀಡಲು ನಮ್ಮ ಅಭ್ಯಂತರವಿಲ್ಲ. ಅವರಿಗೆ ಬಾಗಲಕೋಟೆ ಕ್ಷೇತ್ರ ಹೊರತುಪಡಿಸಿ ಬೇರೆ ಕಡೆ ಕೊಡಲಿ. ಆದರೆ, ಸ್ಥಳೀಯವರೇ ಆದ ವೀಣಾ
ಕಾಶಪ್ಪನವರ್ ಗೆ ಟಿಕೆಟ್ ನಿರಕಾರಿಸಿದ್ದರ ಉದ್ದೇಶವಾದರೂ ಏನು ಪ್ರಶ್ನಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಪಕ್ಷವನ್ನು ಸಂಘಟಿಸಿದ್ದರ ಪರಿಣಾಮ ಏಳು ವಿಧಾನಸಭಾ ಕ್ಷೇತ್ರದ ಪೈಕಿ ಐದು ಕಡೆ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಲು ಸಾಧ್ಯವಾಯಿತು. ಉತ್ತಮ ಸಂಘಟಿಕಿಯಾಗಿರುವ ವೀಣಾ ಕಾಶಪ್ಪನವರ್ ಗೆ ಟಿಕೆಟ್ ಕೊಡದಿರುವುದು ಇಡೀ ಪಂಚಮಸಾಲಿ ಸಮಾಜಕ್ಕೆ ಮಾಡಿದ ಅಪಮಾನ ಎಂದು ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಐದು ವರ್ಷಗಳಿಂದ ಜಿಲ್ಲೆಯ ಎಲ್ಲಾ ಕಡೆ ಸಕ್ರೀಯರಾಗಿದ್ದುಕೊಂಡು ಪಕ್ಷವನ್ನು ಬಲಪಡಿಸುವಲ್ಲಿ ಕಾರ್ಯೋನ್ಮರಾಗಿದ್ದಾರೆ. ಈಗ ಏಕಾಏಕಿ ಟಿಕೆಟ್ ನಿರಕಾರಿಸಿದ್ದಕ್ಕೆ ಕೆಪಿಸಿಸಿ ಸ್ಪಷ್ಟವಾದ ಕಾರಣಗಳನ್ನು ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಯುಕ್ತ ಪಾಟೀಲ್ ಮೂಲತಃ ಬಿಜಾಪುರ ಜಿಲ್ಲೆಯವರು. ಹೊರಗಿನವರನ್ನು ಟಿಕೆಟ್ ಕೊಡುವ ಅಗತ್ಯವಾದರೂ ಏನಿತ್ತು? ಈ ಕೂಡಲೇ  ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡು ನಿಷ್ಠಾವಂತ ರಾದ ವೀಣಾ ಕಾಶಪ್ಪನವರ್ ಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಮ್ಮ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಫಲಿತಾಂಶ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೇ ರೀತಿ ನಮ್ಮ ಸಮಾಜವನ್ನು ಕಡೆಗಣಿಸಿದರೆ,  ಕಾಂಗ್ರೆಸ್ ಪಕ್ಷದ ವಿರುದ್ಧ 28 ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಪಂಚಮಸಾಲಿ ಸಮಾಜವನ್ನು 2A ಗೆ ಸೇರ್ಪಡೆ ಮಾಡಬೇಕು ಎಂದು ರಾಜ್ಯಾದ್ಯಂತ ನಡೆಸಿದ ಹೋರಾಟದಲ್ಲೂ ಅವರು ಸಕ್ರಿಯವಾಗಿಪಾಲ್ಗೊಂಡಿದ್ದರು. ಸಮಾಜದ ಬಗ್ಗೆ ಅಪಾರವಾದ ಕಳಕಳಿ ಇಟ್ಟುಕೊಂಡಿರುವ ಒಬ್ಬ ನಾಯಕಿಗೆ ಟಿಕೆಟ್ ನಿರಾಕರಣೆ ಮಾಡಿರುವುದು ಸರಿಯಲ್ಲ ಎಂದು ಸ್ವಾಮೀಜಿ ಆಕ್ಷೇಪಿಸಿದ್ದಾರೆ.
ಈ ಹಿಂದೆ 2019 ರ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಅಂದು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಶಿವನಂದಾದ್ ಪಾಟೀಲ್ ಅವರಿಗೆ ಸ್ಪರ್ಧೆ ಮಾಡುವಂತೆ ಕೇಳಿಕೊಂಡಿದ್ದರೂ ಹಿಂದೆ ಸರಿದಿದ್ದರು. ಕೊನೆಗೆ ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ವೀಣಾ ಕಾಶಪ್ಪನವರ್ ಸ್ಪರ್ಧೆ ಮಾಡಿದ್ದರು.
ಚುನಾವಣೆಯಲ್ಲಿ ಕೆಲವೇ ಕೆಲವು ಸಾವಿರ ಮತಗಳ ಅಂತರದಿಂದ ಪರಾಭವಗೊಂಡರೂ ಕ್ಷೇತ್ರದ ಜನತೆಯಿಂದ ಹಾಲಿ ಸಂಸದರಗಿಂತಲೂ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಕೂಡಲೇ ಕೆಪಿಸಿಸಿ ಮುಖಂಡರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇಡೀ ರಾಜ್ಯದಲ್ಲಿ ಪಂಚಮಸಾಲಿ ಸಮಾಜದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಒಂದು ವೇಳೆ ವೀಣಾ ಕಾಶಪ್ಪನವರ್ ಗೆ ಟಿಕೆಟ್ ನೀಡದಿದ್ದರೆ ಸದ್ಯದಲ್ಲೇ ಸಮಾಜದ ಮುಖಂಡರ ಜೊತೆಗೆ ಸಭೆ ನಡೆಸಿ ನಿರ್ಧಾರವನ್ನು ಪ್ರಕಟಿಸುವುದಾಗಿ ಜಯಮೃತ್ಯುಂಜಯ ಸ್ವಾಮೀಜಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tags: