ನವದೆಹಲಿ: ನರೇಂದ್ರ ಮೋದಿ ಸಂಪುಟದಲ್ಲಿ ತುಮಕೂರು ಸಂಸದ ವಿ.ಸೋಮಣ್ಣ ಅವರಿಗೆ ಮಂತ್ರಿ ಭಾಗ್ಯ ಫಿಕ್ಸ್ ಆಗಿದೆ.
ಈ ಕುರಿತು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿ.ಸೋಮಣ್ಣ ಬಿಜೆಪಿ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ. ಪಕ್ಷ ನನಗೆ ಯಾವ ಖಾತೆ ಕೊಟ್ರು ಸಮರ್ಥವಾಗಿ ನಿಭಾಯಿಸುವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ನಮಗೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದಾರೆ. ಎಲ್ಲಕ್ಕಿಂತ ದೇಶ ದೊಡ್ಡದು ಎಂದು ತಿಳಿಸಿಕೊಟ್ಟಿದ್ದಾರೆ. ನಾನು ಮೋದಿ ಹಾಗೂ ಪಕ್ಷಕ್ಕೆ ಆಭಾರಿಯಾಗಿದ್ದೇನೆ ಎಂದರು.
ಸೋಮಣ್ಣ ಬಗ್ಗೆ ಒಂದಿಷ್ಟು ಮಾಹಿತಿ
ವಿ.ಸೋಮಣ್ಣ ಅವರು ರಾಮನಗರ ಜಿಲ್ಲೆಯ ದೊಡ್ಡಮರಳವಾಡಿಯಲ್ಲಿ ವೀರಣ್ಣ ಮತ್ತು ಕೆಂಪಮ್ಮ ದಂಪತಿಗಳಿಗೆ 1951ಜುಲೈ 20 ರಂದು ಜನಿಸಿದರು. ಸೋಮಣ್ಣ ಶೈಲಜಾ ದಂಪತಿಗಳಿಗೆ ಮೂರು ಮಕ್ಕಳಿದ್ದಾರೆ. 1983 ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಇವರು 2016 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಯನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ 2018 ರಿಂದ 2023ರವರೆಗೆ ಬೆಂಗಳೂರಿನ ಗೋವಿಂದರಾಜ್ ನಗರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಶಾಸಕರಾಗಿದ್ದರು. ಯಡಿಯೂರಪ್ಪ ಹಾಗೂ ಬಸವರಾಜು ಬೊಮ್ಮಾಯಿ ಸಂಪುಟದಲ್ಲಿ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದರು. ಇದೀಗ 2024 ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.