ಬೆಂಗಳೂರು : ವಿಧಾನಸಭೆಯ ಅಧಿವೇಶನದಲ್ಲಿ ಚಿನ್ನಸ್ವಾಮಿ ಕಾಲ್ತುಳಿಯದ ಬಗ್ಗೆ ಚರ್ಚೆ ನಡೆಯುವ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಎನ್ನುವ ಆರ್‌ಎಸ್‌ಎಸ್ ಗೀತೆ ಕೆಲ ಸಾಲುಗಳನ್ನು ಹಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಇದು ಸಿದ್ದರಾಮಯ್ಯನವರಿಗೆ ನೇರ ಎಚ್ಚರಿಕೆಯೇ? ನೀವು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದಿದ್ದರೆ ನಾನು ಬಿಜೆಪಿ ಸೇರಲು ಸಿದ್ಧನಿದ್ದೇನೆ ಎಂಬ ಸಂದೇಶವೇ?” ಎಂದು ಒಬ್ಬ ಎಕ್ಸ್ ಬಳಕೆದಾರರು ಹೇಳಿದ್ದಾರೆ.
“ಸ್ವಾತಂತ್ರೋತ್ಸವದ ಭಾಷಣದಲ್ಲಿ ಆರ್‌ಎಸ್ಎಸ್ ಹೊಗಳಿದ ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ಟೀಕೆ ಮಾಡುತ್ತಿರುವ ಸಮಯದಲ್ಲಿ ಡಿಕೆ ಶಿವಕುಮಾರ್ ಅವರು ಆರ್‌ಸ್ಎಸ್ ಗೀತೆ ಹಾಡಿದ್ದಾರೆ. ಶೀಘ್ರ ಕಾಂಗ್ರೆಸ್ ಅವರನ್ನು ಸಿಎಂ ಮಾಡದಿದ್ದರೆ, ಅವರು ಕಾಶಿ ಮಥುರಾ ಬಾಕಿ ಹೈ ಎಂಬ ಘೋಷಣೆ ಕೂಗಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ.
ಹುಟ್ಟು ಕಾಂಗ್ರೆಸಿಗ
ಈ ಬಗ್ಗೆ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ನಾನು ಹುಟ್ಟು ಕಾಂಗ್ರೆಸಿಗ, ನನ್ನ ರಕ್ತ, ಜೀವ ಎಲ್ಲಾ ಕಾಂಗ್ರೆಸ್ ನಲ್ಲಿದೆ. ನಾನು ಎಲ್ಲಾ ರಾಜಕೀಯ ಪಕ್ಷಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ. ಆರ್‌ಎಸ್ಎಸ್ ಹೇಗೆ ಕರ್ನಾಟಕದಲ್ಲಿ ಶಾಲೆಗಳನ್ನು ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ ಎಂದು ಅಧ್ಯಯನ ಮಾಡಿದ್ದೇನೆ. ಒಬ್ಬ ನಾಯಕನಾಗಿ ಯಾರು ನನ್ನ ವಿರೋಧಿಗಳು ಎಂದು ನನಗೆ ತಿಳಿದಿರಬೇಕು. ಅದರ ಇತಿಹಾಸದ ಬಗ್ಗೆ ತಿಳಿಯುತ್ತಿದ್ದೇನೆ ಎಂದ ಅವರು, ನಾನು ಬಿಜೆಪಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.





